ಯೇಸುಬಾಲರ ನವೇನ ಪ್ರಾರ್ಥನೆ

ನವೇನ ಪ್ರಾರ್ಥನೆ (9 ದಿನಗಳ ಎಡೆಬಿಡದ ಪ್ರಾರ್ಥನೆ)

ಅದ್ಬುತಶಾಲಿಯಾದ ಬಾಲ ಯೇಸುವೇ, ನಿಮ್ಮ ಸ್ವರೂಪದ ಮುಂದೆ ಸಾಷ್ಟಾಂಗವೆರಗುತ್ತೇವೆ ಮತ್ತು ಸಂಕಷ್ಟದಲ್ಲಿ ಸಿಲುಕಿರುವ ನಮ್ಮ ಹೃದಯದ ಮೇಲೆ ಕಟಾಕ್ಷಿಸುವಂತೆ ಬೇಡಿಕೊಳ್ಳುತ್ತೇವೆ. ನಿಮ್ಮ ದಯಾಭರಿತ ಕೋಮಲವಾದ ಹೃದಯ ನಮ್ಮ ಪ್ರಾರ್ಥನೆಗಳಿಂದ ಮೃದುವಾಗಿ ನಾವು ಕೇಳುತ್ತಿರುವ ಕೋರಿಕೆಗಳನ್ನು ಅನುಗ್ರಹಿಸುವಂತಾಗಲಿ. [ಕೋರಿಕೆಗಳನ್ನು ನಿವೇದಿಸುವುದು]

ನಾವು ಹೊತ್ತು ಬಳಲಿರುವ ಈ ನಿರಾಸೆಗಳನ್ನು, ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ನಿಮಗೊಪ್ಪಿಸುತ್ತೇವೆ. ನಿಮ್ಮ ಪರಿಶುದ್ಧ ಬಾಲ್ಯದ ನಿಮಿತ್ತ ನಮ್ಮ ಪ್ರಾರ್ಥನೆಗಳನ್ನು ಆಲಿಸಿ ನಮಗೆ ಸಾಂತ್ವನವನ್ನೀಯಿರಿ, ಪಿತ ಮತ್ತು ಪವಿತ್ರಾತ್ಮರೊಂದಿಗೆ  ಎಂದೆಂದೂ ಜೀವಿಸುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್‍.

ಕೃತಜ್ಞತಾ ಪ್ರಾರ್ಥನೆ

ಓ ಉದಾರ ಹೃದಯದ ಬಾಲಯೇಸುವೇ, ನಿಮ್ಮ ಕರಗಳಿಂದ ಪಡೆದ ಎಲ್ಲಾ ಆಶೀರ್ವಾದಗಳಿಗಾಗಿ ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸಲು ನಿಮ್ಮ ಪೂಜ್ಯ ಸ್ವರೂಪದೆದುರು ಮೊಣಕಾಲೂರಿದ್ದೇನೆ. ಪಿತ ಮತ್ತು ಪವಿತ್ರಾತ್ಮರೊಂದಿಗೆ ನೀವು ನನ್ನ ಸೃಷ್ಟಿಕರ್ತರು ಮತ್ತು ರಕ್ಷಕರು ಎಂದು ವಿಶ್ವಾಸಿಸುತ್ತೇನೆ. ಇಂದಿನಿಂದ ನನ್ನೆಲ್ಲಾ ನಂಬಿಕೆಯನ್ನು ನಿಮ್ಮಲ್ಲಿರಿಸಿದ್ದೇನೆ. ನಿಮ್ಮ ಈ ಮಹಿಮಾ ಸ್ವರೂಪದಿಂದ ನಿಮ್ಮ ಮೇಲಿನ ಭಕ್ತಿಯು ವಿಶ್ವದೆಲ್ಲೆಡೆ ಹರಡಲಿ ಮತ್ತು ನಿಮ್ಮ ಬಾಲ್ಯದಲ್ಲಿ ವಿಶ್ವಾಸ ಹೆಚ್ಚಲಿ ಹಾಗೂ ಎಂದೂ ಕೇಳರಿಯದ ನಿಮ್ಮ ಕೃಪೆಯನ್ನೂ ಆಶೀರ್ವಾದವನ್ನೂ ಎಲ್ಲರೂ ಗಳಿಸುವಂತಾಗಲಿ.

ಬಾಲಯೇಸುವಿಗೆ ಎಲ್ಲಾ ಸ್ತುತಿಯೂ ಮಹಿಮೆಯೂ ಸಲ್ಲಲಿ, ಆಮೆನ್.

ಬಿನ್ನಹಗಳು

ಓ ಪರಿಶುದ್ದ ಬಾಲಯೇಸುವೇ, ನಿಮ್ಮ ಭೂಲೋಕ ಬಾಳಿನಲ್ಲಿ ನಿಮ್ಮ ಶಕ್ತಿಯನ್ನು ಅನೇಕ ಅದ್ಬುತಗಳ ಮುಖಾಂತರ ವ್ಯಕ್ತಪಡಿಸಿದ್ದೀರಿ.ನಂಬಿಕೆ ಮತ್ತು ವಿಶ್ವಾಸದಿಂದ ನಿಮ್ಮನ್ನು ಕೋರುತ್ತಿರುವ ನಮ್ಮ ಬೇಡಿಕೆಗಳನ್ನು ಆಲಿಸಿ ನಿಮ್ಮ ಶಕ್ತಿಯುತ ಕರಗಳನ್ನು ನಮ್ಮ ಮೇಲೆ ಚಾಚಿ ಹರಸುವಂತೆ ಬೇಡುತ್ತಿದ್ದೇವೆ.

ಪ್ರಭುವಿನ ಪ್ರಾರ್ಥನೆ…

ದೇವವಾಕ್ಯ ಎಂಬುವವರು ಮನುಷ್ಯರಾದರು ಮತ್ತು ನಮ್ಮಲ್ಲಿ ವಾಸಿಸಿದರು [3 ಬಾರಿ]

ನಮೋ ಮರಿಯಾ…

ದೇವವಾಕ್ಯ ಎಂಬುವವರು ಮನುಷ್ಯರಾದರು ಮತ್ತು ನಮ್ಮಲ್ಲಿ ವಾಸಿಸಿದರು [3 ಬಾರಿ]

ಪಿತನಿಗೂ ಮತ್ತು ಸುತನಿಗೂ…

ಈ ಅದ್ಬುತಶಾಲಿಯಾದ ಬಾಲಯೇಸುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿ ನಮ್ಮನ್ನು ಹರಸಿರಿ [3 ಬಾರಿ]