ಒತ್ತಾಸೆ

ಒತ್ತಾಸೆ

ಮನುಷ್ಯರಾದ ನಾವು ನಮ್ಮ ಹುಟ್ಟಿನಿಂದ ಸಾವಿನವರೆಗೆ ಒಬ್ಬರ ಮೇಲೋಬ್ಬರು ಅವಲಂಬಿತರಾಗಿರುತ್ತೇವೆ. ಒಬ್ಬಂಟಿಗರಾಗಿ ನಾವು ಏನನ್ನೂ ಸಾಧಿಸಲಾಗದು. ಎಲ್ಲಾ ಸಂದರ್ಭಗಳಲ್ಲಿಯೂ ನಮಗೆ ಇತರರ ಸಹಾಯ-ಸಹಕಾರ ಅಗತ್ಯ. ಭೂಮಿಯಲ್ಲಿ ಬಿದ್ದ ಬೀಜ ತೇವಾಂಶ, ಸೂರ್ಯನ ಶಾಖ, ಮಣ್ಣಿನಲ್ಲಿರುವ ಪೋಷಾಕಾಂಶ ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತದೆ; ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಕಾಳು-ಕಡ್ಡಿ, ಹುಳು-ಹುಪ್ಪಟೆಗಳನ್ನು ಆಶ್ರಯಿಸಿರುತ್ತವೆ; ಭೂಮಿಯ ಮೇಲೆ ವಾಸಿಸುವ ದೊಡ್ಡ-ಚಿಕ್ಕ ಪ್ರಾಣಿಗಳು, ನೀರಿನಲ್ಲಿರುವ ಜಲಚರಗಳು ಎಲ್ಲವೂ ಒಂದನ್ನೊಂದು ಆಶ್ರಯಿಸಿಕೊಂಡಿವೆ.

ಮನುಷ್ಯನು ಬಾಲ್ಯದಿಂದ-ಪ್ರೌಢಾವಸ್ಥೆಗೆ ಬರುವವರೆಗೆ ತಂದೆ-ತಾಯಿಯರನ್ನು, ಶಿಕ್ಷಕರನ್ನು, ಸ್ನೇಹಿತರನ್ನು ಆಶ್ರಯಿಸಿಕೊಂಡಿರುತ್ತಾನೆ. ಎಲ್ಲಾ ಸಂದರ್ಭಗಳಲ್ಲೂ ಸುತ್ತಲಿರುವವರ ಸಹಾಯ-ಒತ್ತಾಸೆ ಅಪೇಕ್ಷಿಸುತ್ತಾನೆ. ಈ ಒತ್ತಾಸೆ ತನ್ನ ಕಷ್ಟ ಕಾಲದಲ್ಲಿ ಬೇಕಾದ ಸಾಂತ್ವನದಿಂದ ಸಂತೋಷವನ್ನು ಹಂಚಿಕೊಳ್ಳುವ ಕೊಂಡಾಟದವರೆಗೂ ವ್ಯಾಪಿಸುತ್ತದೆ.

ನಾಗರೀಕತೆಯ ಹುಟ್ಟು ಮತ್ತು ಬೆಳವಣಿಗೆ ಈ ಒತ್ತಾಸೆಯನ್ನು ಅವಲಂಬಿಸಿತ್ತು ಎನ್ನುತ್ತಾರೆ ನ್ಯೂಯಾರ್ಕ್‍ನ ಮನುಷ್ಯಶಾಸ್ತ್ರ ವಿಭಾಗದ ಹೆಸರಾಂತ ಮಾರ್ಗರೆಟ್‍ ಮೆಡ್‍. ಇವರ ಬಳಿ ನಾಗರೀಕತೆ ಪ್ರಾರಂಭವಾದುದರ ಪಳೆಯುಳಿಕೆ ಯಾವುದು ಎಂದು ಪ್ರಶ್ನಿಸಲಾಯಿತು. ಎಲ್ಲರೂ ಹಳೆಯ ಮಡಿಕೆ-ಕುಡಿಕೆಗಳು ಎನ್ನುತ್ತಾರೆ ಎಂದು ಭಾವಿಸಿದ್ದರು, ಆದರೆ, ಎಲ್ಲರೂ ಆಶ್ಚರ್ಯಪಡುವಂತೆ ಅವರು ಹೇಳುತ್ತಾರೆ, “ತೊಡೆ ಮೂಳೆ”; “ಕಾರಣ, ಪ್ರಾಣಿಗಳ ಮಧ್ಯೆ ತೊಡೆಮೂಳೆ ಮುರಿದ ಪ್ರಾಣಿಗಳು ಬದುಕುಳಿಯಲಾರವು. ಏಕೆಂದರೆ, ಮುರಿದ ಮೂಳೆ ಸರಿಯಾಗುವಷ್ಟರಲ್ಲಿ ಅವು ಇತರ ಪ್ರಾಣಿಗಳಿಗೆ ಆಹಾರವಾಗಿ ಬಿಡುತ್ತವೆ ಅಥವಾ ತಾವೇ ಆಹಾರ ಒದಗಿಸಿಕೊಳ್ಳಲಾಗದೆ ಸಾವನಪ್ಪುತ್ತವೆ. ಹಾಗಾಗದೆ, ಅವು ಬದುಕುಳಿದವು ಎಂದರೆ, ಅದರರ್ಥ ಅದು ಗುಣವಾಗುವವರೆಗೆ ಅದಕ್ಕೆ ಯಾರೋ ಆಹಾರ ಒದಗಿಸಿ, ರಕ್ಷಣೆ ನೀಡಿ ಗುಣಪಡಿಸಿದ್ದಾರೆ. ಹೀಗೆ, ಒತ್ತಾಸೆಯಾಗಿ ನಿಂತಿದ್ದೇ ನಾಗರೀಕತೆ ಪ್ರಾರಂಭವಾದುದಕ್ಕೆ ಕುರುಹು”.

ನಾಗರೀಕತೆ ಎಂದರೆ ನಗರಗಳ ಉಗಮ ಅಥವಾ ಜನರು ವ್ಯವಸ್ಥಿತವಾಗಿ ಜೀವಿಸಲು ಸೌಕರ್ಯಗಳನ್ನು ಮಾಡಿಕೊಳ್ಳುವುದು ಅಥವಾ ಮಾಡಿಕೊಡುವುದು ಅಲ್ಲ! ಬದಲಿಗೆ, ಒಟ್ಟಾಗಿ ಒಂದೆಡೆ ಜೀವಿಸುವ ಜನ ಮನುಷ್ಯರು ಮಾತ್ರವಲ್ಲ ಪ್ರಾಣಿಗಳನ್ನು ಮತ್ತು ಪರಿಸರವನ್ನು ಜಾಗರೂಕರಾಗಿ ಕಾಪಾಡಿ, ಉಳಿಸಿ-ಬೆಳೆಸುವುದು. ಒತ್ತಾಸೆ ಮನುಷ್ಯ-ಮನುಷ್ಯರ ಮಧ್ಯೆ ಮಾತ್ರ ಸಾಲದು, ತನಗೆ ಬೇಕು ಎನಿಸುವ ಸಹಕಾರ, ಸಹಾಯ, ಪ್ರೋತ್ಸಾಹ ಎಲ್ಲರಿಗೂ ಬೇಕು ಎಂಬುದನ್ನು ಮನಗಾಣುವುದು ಮತ್ತು ನೀಡುವುದು. ಇಂತಹ ಸಹಕಾರ, ಸಹಾಯ, ಪ್ರೋತ್ಸಾಹ ಜನರಿಗೆ ಮಾತ್ರವಲ್ಲ ಖಗ-ಮೃಗಗಳಿಗೂ, ಮರ-ಸಸ್ಯಗಳಿಗೂ ಬೇಕು.

ನಿಜವಾಗಿ ನೋಡುವುದಾದರೆ ಪ್ರಕೃತಿಯಲ್ಲಿ ಮನುಷ್ಯ ಕೊಡುವವನಲ್ಲ, ಪಡೆಯುವವ! ಆತ ಪ್ರಕೃತಿಯಿಂದ ಬೇಡುವವ, ನೀಡುವವನಲ್ಲ; ಪ್ರಕೃತಿಗೆ ಆತ ಒತ್ತಾಸೆ ನೀಡುವವನಲ್ಲ, ಅದರಿಂದ ಒತ್ತಾಸೆಯನ್ನು ಅಪೇಕ್ಷಿಸುವವನು. ನಮ್ಮ ಉಳಿವಿಗೆ ನಾವು ನಿಸರ್ಗವನ್ನು ಆಶ್ರಯಿಸಿಕೊಂಡಿದ್ದೇವೆ ಎಂಬುದನ್ನು ನಿಸರ್ಗವೇ ಆಗಿಂದ್ದಾಗ್ಗೆ ನಮಗೆ ನೆನಪಿಸುತ್ತದೆ. ನಮ್ಮ ಸಹಾಯವಿಲ್ಲದೆಯೇ ಪ್ರಕೃತಿ ತಾನೇ ಉಜ್ಜೀವಗೊಳ್ಳಬಲ್ಲದು, ಮರುನಿರ್ಮಿಸಿಕೊಳ್ಳಬಲ್ಲದು ಮತ್ತು ಉಳಿಯಬಲ್ಲದು, ಮನುಷ್ಯನಿಗೆ ಇದು ಅಸಾಧ್ಯ!

ಸರಿಯಾಗಿ ಗಮನಿಸುವುದಾದರೆ, ಮನುಷ್ಯ ಎಲ್ಲಾ ಕ್ಷೇತ್ರಗಳಲ್ಲೂ ಇನ್ನೂ ಕೇವಲ ಶಿಶು. ನಾಗರೀಕತೆಯಲ್ಲಿ ನಾವು ಬೆಳೆದಿದ್ದೇವೆ ಎನ್ನುತ್ತೇವೆ ಆದರೆ, ಸ್ವಾರ್ಥ-ಹಿಂಸೆ ತೊರೆದು ನಮ್ಮ ಮನಸ್ಸನ್ನೇ ಇನ್ನೂ ಗೆಲ್ಲಲಾಗಿಲ್ಲ; ತಂತ್ರಜ್ಞಾನದಲ್ಲಿ ಮುಂದಿದ್ದೇವೆ ಎನ್ನುತ್ತೇವೆ ಆದರೆ, ಪ್ರೀತಿ-ಸ್ನೇಹಗಳನ್ನು ಉಳಿಸಿಕೊಳ್ಳಲು ಪರದಾಡುತ್ತೇವೆ; ಸೂರ್ಯ-ಚಂದ್ರ-ಗ್ರಹಗಳನ್ನು ತಿಳಿದಿದ್ದೇವೆ ಎನ್ನುತ್ತೇವೆ ಆದರೆ, ನೆರೆಹೊರೆಯವರ ಕಷ್ಟ-ನಷ್ಟದಲ್ಲಿ ಭಾಗಿಯಾಗಲು ನಮಗೆ ಸಮಯವಿಲ್ಲ.

ನಿಸರ್ಗದಲ್ಲಿ ಎಲ್ಲವೂ-ಎಲ್ಲರೂ ಮುಖ್ಯವಾದವರೇ, ಮನುಷ್ಯ ಈ ಪ್ರಕೃತಿಯ ಮಗು ಮಾತ್ರ, ಮಗುವಿಗೆ ನಿಸರ್ಗ ಮಾತೆಯ ಒತ್ತಾಸೆ ಸದಾ ಅತ್ಯಗತ್ಯ. ಒತ್ತಾಸೆ ಎಂಬುದು ನಮ್ಮ ಪ್ರತಿನಿತ್ಯದ ಅಗತ್ಯ ಮತ್ತು ಬೇಡಿಕೆ; ಇದನ್ನರಿತು, ಪ್ರಕೃತಿ, ಪ್ರಾಣಿ-ಪಕ್ಷಿ ಮತ್ತು ಮನುಷ್ಯರಿಗೆ ಸರಿಯಾದ ಸಮಯದಲ್ಲಿ ಒತ್ತಾಸೆಯನ್ನು ನೀಡಿ-ಪಡೆಯುವುದೇ ಈ ಜೀವನ.

ಫಾ. ವಿಜಯರಾಜ್ ಮೈಸೂರು