ನಿಶ್ಯಬ್ದ

ನಿಶ್ಯಬ್ದ

ಮನುಷ್ಯನ ಪಂಚೇಂದ್ರಿಯಗಳು ಅದ್ಬುತವಾದವು. ಅವುಗಳಲ್ಲಿ ಒಂದು ಊನವಾದರೂ ಬಾಳು ದುರಂತ. ಇವುಗಳು ಸುತ್ತಲಿನ ಮಾಹಿತಿಯನ್ನು ಸತತವಾಗಿ ಮೆದುಳಿಗೆ ಒದಗಿಸುತ್ತಿರುತ್ತವೆ. ಜೀವನವನ್ನು ಸವಿಯಲು ದೇವರು ಸೃಷ್ಟಿಸಿರುವ ಪಂಚೇಂದ್ರಿಯಗಳನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಬಹಳ ಅಗತ್ಯ.

ಮನುಷ್ಯನ ಶ್ರವಣ ಶಕ್ತಿ 20 ಹರ್ಟ್ಜ್ ಗಳಿಂದ 20,000 ಹರ್ಟ್ಜ್ ಗಳವರೆಗೆ ಇರುತ್ತದೆ. ಮಾನವ 20 ಹರ್ಟ್ಜ್ ಗಿಂತ ಕಮ್ಮಿ ಶಬ್ದವನ್ನು ಗ್ರಹಿಸಲಾಗದು ಮತ್ತು 20,000 ಹರ್ಟ್ಜ್ ಗಳವರೆಗೆ ಕೇಳಬಹುದಾದರೂ 15,000 ಹರ್ಟ್ಜ್ ಗಿಂತ ಹೆಚ್ಚಿನ ಶಬ್ದವನ್ನು ಕೇಳುವಾಗಲೇ ಕಿವಿ ತಮಟೆಯಲ್ಲಿ ನೋವುಂಟಾಗುತ್ತದೆ. ಹೀಗಾಗಿ, ಸದಾ ಶಬ್ದವಿರುವ ಸ್ಥಳಗಳಲ್ಲಿರುವುದು ಶ್ರವಣ ಶಕ್ತಿಯನ್ನು ಬಾಧಿಸುತ್ತದೆ. ಆದುದರಿಂದ, ಶಬ್ದವನ್ನು ಕೇಳುವಷ್ಟೇ ಮುಖ್ಯವಾದುದು ನಿಶ್ಯಬ್ದ ಪರಿಸರದಲ್ಲಿರುವುದು.

ನಿಶ್ಯಬ್ದತೆ ಅಂದರೆ ಶಬ್ದವಿಲ್ಲದ ಸನ್ನಿವೇಶ ಅಥವಾ ಪರಿಸರ. ಅನೇಕ ಬಾರಿ ಶಬ್ದಕ್ಕಿಂತಲೂ ನಿಶ್ಯಬ್ದತೆ ಅಪ್ಯಾಯವಾಗಿರುತ್ತದೆ. ಪ್ರತಿದಿನದ ಚಟುವಟಿಕೆಗಳ ಮಧ್ಯೆ ನಿಶ್ಯಬ್ದತೆಗೆ ಸಮಯ ನೀಡುವುದು ಬಹಳ ಅಗತ್ಯ. ಶಬ್ದ ಶಕ್ತಿಯ ಒಂದು ರೂಪ, ಧ್ವನಿಯಾಗಿ ಕೇಳಿದಾಗ ಕಿವಿಗಳ ಮೇಲೆ ಬಿದ್ದು ಮೆದುಳಿನಲ್ಲಿ ಮಾತಾಗಿ ಗ್ರಹಿಸಿಕೊಂಡದ್ದು ಮಾತ್ರವಲ್ಲ, ನೆನಪಿನಲ್ಲಿ ಉಳಿದು ಪ್ರತಿದಿನ ತರಂಗಗಳನ್ನು ಏಳಿಸುತ್ತವೆ. ನಿಶ್ಯಬ್ದತೆಯ ಸಮಯದಲ್ಲಿ ಮನಸ್ಸಿನಲ್ಲಿ ಕೇವಲ ಶಬ್ದವಲ್ಲ, ದುಂದುಬಿಯೇ ಬಾರಿಸುತ್ತಿರುತ್ತದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ, ನಮ್ಮ ನೆನಪಿನಲ್ಲಿ ಉಳಿದಿರುವ ಅನೇಕರ-ನಮ್ಮ ಮಾತುಗಳು ಇದರಲ್ಲಿ ಮುಖ್ಯವಾದುದು. ಹೇಳಿದವರು ಕಣ್ಮರೆಯಾದರೂ ಆ ಶಬ್ದ ಇನ್ನೂ ಕಿವಿಯಲ್ಲಿ ಅನುರಣಿಸುವಂತಿರುತ್ತದೆ. ಸಂತೋಷ, ಶಾಂತಿನೆಮ್ಮದಿ ಉಂಟುಮಾಡುವ ಮಾತುಗಳನ್ನು ಕೇಳಿದ್ದರೂ ಕೂಡ ನೋವನ್ನುಂಟುಮಾಡಿದ, ಹೃದಯವನ್ನು ಕದಡಿದ ಮಾತುಗಳು ಅಚ್ಚಳಿಯದೇ ಇನ್ನೂ ಶಬ್ದವಾಗಿಯೇ ಉಳಿದುಬಿಡುತ್ತವೆ. ಅದರ ನೆನಪುಗಳು ಮರುಕಳಿಸಿದಾಗೆಲ್ಲಾ ಧ್ವನಿ ಸ್ಪಷ್ಟವಾಗಿ ಕೇಳುವಂತಿರುತ್ತದೆ. ಬಾಹ್ಯವಾಗಿ ಮೌನ ವಹಿಸಿಸುವಾಗ ಮನಸ್ಸಿನಾಳದ ಶಬ್ದಗಳನ್ನು ಕೇಳಲು ಸಾಧ್ಯ ಮಾತ್ರವಲ್ಲ ಅವುಗಳನ್ನು ಬೇರ್ಪಡಿಸಿ, ನಿಭಾಯಿಸಲು ಸಾಧ್ಯ. ಹೀಗೆ ಮನಸ್ಸಿನಾಳದಲ್ಲಿ ಉಂಟಾಗುವ ನಿಶ್ಯಬ್ದತೆಯನ್ನೇ ನೆಮ್ಮದಿ ಎನ್ನಬಹುದು. ನಿಶ್ಯಬ್ದತೆಯಿಂದ ಏರ್ಪಡುವ ಈ ನಿರ್ವಿಕಾರ ಭಾವನೆ ನಮ್ಮನ್ನು ನಮ್ಮೆದುರಿನಲ್ಲಿ ನಿಲ್ಲಿಸುತ್ತದೆ, ಇದನ್ನೇ ಅಂತಃಪರೀಕ್ಷೆ ಅಥವಾ ಆತ್ಮಾವಲೋಕನ ಎನ್ನುತ್ತೇವೆ.

ಶಬ್ದಕ್ಕೆ ಮನದಲ್ಲಿ ಸಂಚಲನ ಉಂಟುಮಾಡುವ ಶಕ್ತಿಯಿದ್ದರೆ, ನಿಶ್ಯಬ್ದಕ್ಕೆ ಪ್ರಶಾಂತಿಯನ್ನು ಉಂಟುಮಾಡುವ ಶಕ್ತಿಯಿದೆ; ಶಬ್ದ ನಮ್ಮ ಸುತ್ತಲೂ ಸದಾ ಇರುವುದಾದರೆ, ನಿಶ್ಯಬ್ದತೆಯನ್ನು ನಾವು ಸೃಷ್ಟಿಸಿಕೊಳ್ಳಬೇಕಾಗುತ್ತದೆ; ಬಾಹ್ಯ ಶಬ್ದದಿಂದ ತುಮುಲಕ್ಕೆ ಒಳಗಾದರೆ, ಆಂತರಿಕ ನಿಶ್ಯಬ್ದತೆಯನ್ನು ಅಭ್ಯಸಿಸಿ ಮನಸ್ಸನ್ನು ಸಂತೈಸಿಕೊಳ್ಳಬೇಕಾಗಿರುತ್ತದೆ. ಹೀಗೆ, ಶಬ್ದ-ನಿಶ್ಯಬ್ದಗಳ ನಡುವೆ ಹೊಂದಾಣಿಕೆಯ ಜೀವನ ಮನುಷ್ಯನಿಗೆ ತಪ್ಪಿಸಲಾಗದ ಸನ್ನಿವೇಶ, ಆತ್ಮಾವಲೋಕನಕ್ಕೂ-ನೆಮ್ಮದಿಗೂ ನಿಶ್ಯಬ್ದ ಒಂದು ಮುಖ್ಯದಾರಿ.

ಫಾ. ವಿಜಯರಾಜ್‍, ಮೈಸೂರು