ದೈನಂದಿನ ಸಾಮಾನ್ಯ ಪ್ರಾರ್ಥನೆಗಳು

ಶಿಲುಬೆಯ ಗುರುತು

ಪವಿತ್ರ ಶಿಲುಬೆಯ ಗುರುತಿನ ಮೂಲಕ

ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿರಿ.

ನಮ್ಮ ಸರ್ವೇಶ್ವರ, ಪಿತನ ಮತ್ತು ಸುತನ ಮತ್ತು

ಪವಿತ್ರಾತ್ಮನ ನಾಮದಲ್ಲಿ ಆಮೆನ್‍.

ಪರಮತ್ರಿತ್ವ ಸ್ತೋತ್ರ

ಪಿತನಿಗೂ ಮತ್ತು ಸುತನಿಗೂ ಮತ್ತು ಪವಿತ್ರಾತ್ಮರಿಗೂ ಸ್ತೋತ್ರವಾಗಲಿ

ಆದಿಯಲ್ಲಿದ್ದ ಹಾಗೆಯೇ, ಈಗಲೂ ಸದಾಕಾಲಕ್ಕೂ ಆಮೆನ್.

ಪ್ರಭುವಿನ ಪ್ರಾರ್ಥನೆ

ಸ್ವರ್ಗದಲ್ಲಿರುವ ನಮ್ಮ ತಂದೆಯೇ,

ನಿಮ್ಮ ನಾಮ ಪೂಜಿತವಾಗಲಿ

ನಿಮ್ಮ ರಾಜ್ಯ ಬರಲಿ

ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವಂತೆಯೇ

ಭುವಿಯಲ್ಲಿಯೂ ನೆರವೇರಲಿ.

ನಮ್ಮ ಅನುದಿನದ ಆಹಾರವನ್ನು

ಇಂದು ನಮಗೆ ನೀಡಿರಿ.

ನಮಗೆ ತಪ್ಪು ಮಾಡಿದವರನು ನಾವು

ಕ್ಷಮಿಸುವ ಪ್ರಕಾರ ನಮ್ಮ ಪಾಪಗಳನ್ನು ಕ್ಷಮಿಸಿರಿ

ನಮ್ಮನ್ನು ಶೋಧನೆಗೆ ಒಳಪಡಿಸದೆ

ಕೇಡಿನಿಂದ ನಮ್ಮನ್ನು ರಕ್ಷಿಸಿರಿ. ಆಮೆನ್.

ನಮೋ ಮರಿಯ ಪ್ರಾರ್ಥನೆ

ನಮೋ ಮರಿಯಾ ಪ್ರಸಾದ ಪೂರ್ಣೆಯೇ

ಪ್ರಭು ನಿಮ್ಮೊಡನೆ ಇದ್ದಾರೆ

ಸ್ತ್ರೀಯರಲ್ಲಿ ನೀವು ಧನ್ಯರು

ಮತ್ತು ನಿಮ್ಮ ಉದರದ ಫಲವಾದ

ಯೇಸುವು ಧನ್ಯರು.

ಸಂತ ಮರಿಯ ದೇವ ಮಾತೆಯೇ

ಪಾಪಿಗಳಾಗಿರುವ ನಮಗಾಗಿ

ಈಗಲೂ ನಮ್ಮ ಮರಣದ ಸಮಯದಲ್ಲೂ

ಪ್ರಾರ್ಥಿಸಿರಿ, ಆಮೆನ್.

ತ್ರಿಕಾಲ ಪ್ರಾರ್ಥನೆ

  • ಪ್ರಭುವಿನ ದೂತನು ಮರಿಯಮ್ಮನವರಿಗೆ ಸಂದೇಶವಿತ್ತನು

          ಅವರು ಪವಿತ್ರಾತ್ಮರಿಂದ ಗರ್ಭದರಿಸಿದರು. ನಮೋ ಮರಿಯಾ…

  • ಇಗೋ ಪ್ರಭುವಿನ ಸೇವಕಿ

          ನಿಮ್ಮ ವಚನದಂತೆಯೇ ನನಗಾಗಲಿ. ನಮೋ ಮರಿಯಾ…

  • ವಾಕ್ಯ ಎಂಬುವವರು ಮನುಜರಾದರು

          ಮತ್ತು ನಮ್ಮಲ್ಲಿ ವಾಸಮಾಡಿದರು. ನಮೋ ಮರಿಯಾ…

ಶ್ಲೋಕ: ಪ್ರಭುವಿನ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ

ಪ್ರತಿಶ್ಲೋಕ: ಪರಿಶುದ್ಧ ದೇವಮಾತೆಯೇ ನಮಗಾಗಿ ಪ್ರಾರ್ಥಿಸಿರಿ.

ಪ್ರಾರ್ಥಿಸೋಣ

ಸ್ವಾಮಿ, ದೇವದೂತನ ಸಂದೇಶದಿಂದ ನಿಮ್ಮ ಪುತ್ರರಾದ ಯೇಸುಕ್ರಿಸ್ತರು ಮನುಷ್ಯ ಸ್ವಭಾವ ತಾಳಿದ್ದನ್ನು ಅರಿತಿರುವ ನಾವು, ಅವರ ಪಾಡುಗಳ ಹಾಗೂ ಶಿಲುಬೆಯ ಮೂಲಕ ಪುನರುತ್ಥಾನದ ಮಹಿಮೆಯನ್ನು ಪಡೆಯುವಂತೆ, ನಿಮ್ಮ ವರಪ್ರಸಾದವನ್ನು ನಮ್ಮ ಹೃದಯದಲ್ಲಿ ಸುರಿಸಬೇಕೆಂದು ನಮ್ಮ ಪ್ರಭುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್.

ಪ್ರೇಷಿತರ ವಿಶ್ವಾಸ ಸಂಗ್ರಹ

ಸ್ವರ್ಗವನ್ನು ಭುವಿಯನ್ನೂ ಸೃಷ್ಟಿಸಿದ ಸರ್ವಶಕ್ತ ದೇವಪಿತನನ್ನು ವಿಶ್ವಾಸಿಸುತ್ತೇನೆ. ಅವರ ಏಕಮಾತ್ರ ಪುತ್ರರೂ, ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ. ಇವರು ಪವಿತ್ರಾತ್ಮರಿಂದ ಗರ್ಭ ಧರಿಸಿದ ಕನ್ಯಾಮರಿಯಮ್ಮನವರಲ್ಲಿ ಹುಟ್ಟಿದರು. ಪೋಂತ್ಸಿಯಸ್ ಪಿಲಾತನ ಅಧಿಕಾರದಲ್ಲಿ ಯಾತನೆ ಅನುಭವಿಸಿ, ಶಿಲುಬೆಗೇರಿಸಲ್ಪಟ್ಟು, ಮೃತರಾಗಿ ಸಮಾಧಿ ಮಾಡಲ್ಪಟ್ಟರು. ಪಾತಾಳಕ್ಕಿಳಿದು ಮೂರನೇ ದಿನ ಮೃತರ ಮಧ್ಯದಿಂದ ಪುನರುತ್ಥಾನರಾಗಿ ಎದ್ದರು. ಸ್ವರ್ಗಕ್ಕೇರಿ ಪಿತನ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪುಕೊಡಲು ಬರುವರು. ಪವಿತ್ರಾತ್ಮರನ್ನು ವಿಶ್ವಾಸಿಸುತ್ತೇನೆ. ಪವಿತ್ರ ಕಥೋಲಿಕ ಧರ್ಮಸಭೆಯನ್ನೂ, ಸಂತರ ಅನ್ಯೋನ್ಯತೆಯನ್ನೂ ವಿಶ್ವಾಸಿಸುತ್ತೇನೆ. ಪಾಪಪರಿಹಾರವನ್ನೂ, ಮೃತರ ಪುನರುತ್ಥಾನವನ್ನೂ, ನಿತ್ಯಜೀವವನ್ನೂ ವಿಶ್ವಾಸಿಸುತ್ತೇನೆ, ಆಮೆನ್.

ನಮೋ ರಾಣಿಯೇ ಪ್ರಾರ್ಥನೆ

ನಮೋ ರಾಣಿಯೇ, ದಯೆಯ ತಾಯಿಯೇ, ನಮ್ಮ ಜೀವವೇ, ಮಾಧುರ್ಯವೇ ಮತ್ತು ನಂಬಿಕೆಯೇ. ಏವೆಯ ಬಹಿಷ್ಕೃತ ಮಕ್ಕಳಾದ ನಾವು ನಿಮಗೆ ಮೊರೆಯಿಡುತ್ತೇವೆ. ಈ ಕಣ್ಣೀರ ಕಣಿವೆಯಲ್ಲಿ ಬಹಳ ಸಂಕಟದಿಂದ ಅತ್ತು ಪ್ರಲಾಪಿಸುತ್ತೇವೆ. ಆದುದರಿಂದ, ನಮ್ಮ ಆಶ್ರಯವೇ, ನಿಮ್ಮ ಕೃಪಾಕಟಾಕ್ಷವನ್ನು ನಮ್ಮ ಮೇಲೆ ಇಡಿರಿ. ಮತ್ತು ಈ ದೇಶಾಂತರ ವಾಸವು ತೀರಿದ ಬಳಿಕ ನಿಮ್ಮ ಉದರದ ಧನ್ಯ ಫಲವಾದ ಯೇಸುವಿನ ದರ್ಶನವನ್ನು ನಮಗೆ ನೀಡಿರಿ. ದಯಾಪರಿಯೇ, ಪ್ರೀತಿಮಯಿಯೇ, ಮಧುರು ಕನ್ಯಾಮರಿಯಾ.

ಶ್ಲೋಕ: ಪ್ರಭುವಿನ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ

ಪ್ರತಿಶ್ಲೋಕ: ಪರಿಶುದ್ಧ ದೇವಮಾತೆಯೇ ನಮಗಾಗಿ ಪ್ರಾರ್ಥಿಸಿರಿ.

ಪ್ರಾರ್ಥಿಸೋಣ

ಸರ್ವಶಕ್ತರೂ ನಿತ್ಯರೂ ಆಗಿರುವ ಸರ್ವೇಶ್ವರಾ, ಮಹಿಮಾಭರಿತ ಕನ್ಯಾಮರಿಯಮ್ಮನವರ ಆತ್ಮವನ್ನೂ ಶರೀರವನ್ನೂ ಪವಿತ್ರಾತ್ಮರ ಸಹಾಯದಿಂದ ನಿಮ್ಮ ಪುತ್ರರಿಗೆ ಯೋಗ್ಯವಾದ ವಾಸಸ್ಥಾನವನ್ನಾಗಿ ಮಾಡಿದಿರಿ. ಅಂತಹ ಪರಿಶುದ್ಧ ಮಾತೆಯನ್ನು ಸಂತೋಷದಿಂದ ಸ್ಮರಿಸಿಕೊಳ್ಳುವ ನಮ್ಮನ್ನು, ಅವರ ದಯಾಪರ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದಲೂ ನಿತ್ಯ ಮರಣದಿಂದಲೂ ರಕ್ಷಿಸಬೇಕೆಂದು ನಮ್ಮ ಪ್ರಭುಯೇಸು ಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ, ಆಮೆನ್‍.

ಪಶ್ಚಾತ್ತಾಪದ ವಿಧಾನ

ಸರ್ವೇಶ್ವರಾ, ಪ್ರೀತಿಪಾತ್ರರಾದ ತಂದೆಯೇ, ನನ್ನ ಪಾಪಗಳಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮನ್ನು ದುಃಖಪಡಿಸಿದ್ದೇನೆ. ನಿಮ್ಮ ಪುತ್ರರಾದ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ್ದೇನೆ, ನಿಮ್ಮ ದಂಡನೆಗೆ ಗುರಿಯಾಗಿದ್ದೇನೆ. ಆದುದರಿಂದ, ನಾನು ಮಾಡಿದ ಪಾಪಗಳಿಗಾಗಿ ಬಹಳ ವ್ಯಸನಪಡುತ್ತೇನೆ, ಬಹಳ ದುಃಖಪಡುತ್ತೇನೆ, ಬಹಳ ಪಶ್ಚಾತಾಪಪಡುತ್ತೇನೆ. ಇನ್ನು ಮೇಲೆ ನಿಮ್ಮ ವರಪ್ರಸಾದದ ಸಹಾಯದಿಂದ ನಿಮ್ಮ ಚಿತ್ತದ ಪ್ರಕಾರ ನಡೆದು ಪಾಪ ಮಾಡುವುದಿಲ್ಲವೆಂದು ಧೃಡ ಪ್ರತಿಜ್ಞೆ ಮಾಡುತ್ತೇನೆ, ಆಮೆನ್‍.

ಪ್ರೀತಿಯ ವಿಧಾನ

ಸರ್ವೇಶ್ವರಾ, ನೀವು ಮಿತಿಯಿಲ್ಲದ ಪ್ರೀತಿಗೆ ಪಾತ್ರರಾಗಿದ್ದೀರಿ. ನೀವು ನನ್ನನ್ನು ಪ್ರೀತಿಯಿಂದ ಸೃಷ್ಟಿಸಿ, ರಕ್ಷಿಸಿ ನಿಮ್ಮನ್ನೇ ನನಗೆ ತಿಳಿಯಪಡಿಸಿದ್ದೀರಿ. ಆದುದರಿಂದ, ನಾನು ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮಗೋಸ್ಕರ ನನ್ನಂತೆಯೇ ಪರರನ್ನು ಪ್ರೀತಿಸುತ್ತೇನೆ, ಆಮೆನ್.

ವಿಶ್ವಾಸದ ವಿಧಾನ

ಸರ್ವೇಶ್ವರಾ, ನೀವು ಒಬ್ಬರೇ ದೇವರಾಗಿದ್ದೂ ನಿಮ್ಮಲ್ಲಿ ಪಿತ, ಸುತ ಮತ್ತು ಪವಿತ್ರಾತ್ಮರು ಎಂಬ ದೈವೀ ವ್ಯಕ್ತಿಗಳಿದ್ದಾರೆಂದು ನಾನು ವಿಶ್ವಾಸಿಸುತ್ತೇನೆ. ನಿಮ್ಮ ಪುತ್ರ ಮನುಷ್ಯರಾಗಿ ಮತ್ತು ನಮ್ಮ ಪಾಪಗಳಿಗೋಸ್ಕರ ಮೃತರಾಗಿ ಜೀವಂತರಿಗೂ ಮೃತರಿಗೂ ನ್ಯಾಯ ನಿರ್ಣಯ ಮಾಡಲು ಬರುವರೆಂದು ವಿಶ್ವಾಸಿಸುತ್ತೇನೆ. ಪವಿತ್ರ ಕಥೋಲಿಕ ಧರ್ಮಸಭೆಯು ಬೋಧಿಸುವಂತಹ ಎಲ್ಲಾ ಸತ್ಯಗಳನ್ನು ನೀವೇ ತಿಳಿಯಪಡಿಸಿದ್ದೀರಿ. ಅನಂತ ಜ್ಞಾನವೂ, ಸತ್ಯವೂ ಆಗಿರುವ ನೀವು ಮೋಸ ಹೋಗುವವರಲ್ಲ ಹಾಗೂ ಮೋಸ ಮಾಡುವವರು ಅಲ್ಲ ಎಂಬುದನ್ನು ನಾನು ವಿಶ್ವಾಸಿಸುತ್ತೇನೆ, ಈ ವಿಶ್ವಾಸದಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಿಸುತ್ತೇನೆ, ಆಮೆನ್‍.

ಭರವಸೆಯ ವಿಧಾನ

ಸರ್ವೇಶ್ವರಾ, ನೀವು ಅನಂತ ಶಕ್ತಿಶಾಲಿ, ಪ್ರಾಮಾಣಿಕರು, ದಯಾಪರರು ಮತ್ತು ಕೃಪಾಳು. ನೀವು ವಾಗ್ದಾನಿಸಿದ ಮೇರೆಗೆ ನಿಮ್ಮ ಕೃಪಾವರದಿಂದ ನನ್ನ ಎಲ್ಲಾ ಪಾಪಗಳಿಗೆ ಕ್ಷಮೆಯನ್ನು ಮತ್ತು ಇಹಲೋಕದ ಜೀವನ ಮುಗಿದಾಗ ಅನಂತ ಆನಂದವನ್ನು ನಾನು ಪಡೆಯುವೆನೆಂದೆ ನನ್ನ ಭರವಸೆ. ಈ ಭರವಸೆಯಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಸಿದ್ದೇನೆ, ಆಮೆನ್.

ಕ್ರಿಸ್ತರ ಆತ್ಮವೇ ನನ್ನ ಶುದ್ದಗೊಳಿಸು

ಕ್ರಿಸ್ತರ ಆತ್ಮವೇ ನನ್ನ ಶುದ್ದಗೊಳಿಸು

ಕ್ರಿಸ್ತರ ದೇಹವೇ ನನ್ನ ರಕ್ಷಿಸು

ಕ್ರಿಸ್ತರ ರಕ್ತವೇ ನನ್ನ ತೃಪ್ತಿಪಡಿಸು

ಪಾರ್ಶ್ವದ ಜಲವೇ ನನ್ನ ಮೀಯಿಸು

ಕ್ರಿಸ್ತರ ಪಾಡುವೇ ನನ್ನ ಬಲಗೊಳಿಸು

ಓ ಪ್ರಿಯ ಯೇಸುವೇ ನನ್ನನ್ನು ಆಲಿಸು

ನಿನ್ನ ಗಾಯಗಳ ಒಳಗೆ ನನ್ನನ್ನು ಅಡಗಿಸು

ನಿನ್ನಗಲ ಬಿಡದಿರು ಯೇಸು

ದುಷ್ಟರ ಕೈಯಿಂದ ನನ್ನ ಮುಕ್ತಗೊಳಿಸು

ಮರಣದ ವೇಳೆಯೊಳ್ ಎನ್ನ ಕರೆಸು

ಭಕ್ತ ಸಂತರೊಂದಿಗೆ ನಿನ್ನನ್ನು ಸ್ತುತಿಸಲ್‍

ಮೋಕ್ಷದ ದ್ವಾರವ ತೆರೆದಿಡು ಯೇಸು, ಆಮೆನ್‍.