ಪ್ರಕಟಣೆಗಳು 07-06-2020

ಚರ್ಚುಗಳಿಗೆ ಕರೋನಾ ಮಾರ್ಗಸೂತ್ರಗಳು

ಭಯಾನಕ ಕೊರೋನಾ ವೈರಾಣು ಮನುಷ್ಯನ ಕಣ್ಣು ಮೂಗು ಬಾಯಿ ಮೂಲಕ ಗಂಟಲಲ್ಲಿ ಪ್ರವೇಶಿಸಿ ಅಲ್ಲಿಂದ ಉಸಿರುಚೀಲ ಹೊಕ್ಕು ದೇಹವನ್ನು ದುರ್ಬಲಗೊಳಿಸಿ ಸಾಯಿಸುತ್ತದೆ. ಆದ್ದರಿಂದ, ಒಬ್ಬರಿಂದ ಒಬ್ಬರು ದೂರವಿರಿ, ಕೈಗಳಿಂದ ಏನನ್ನೂ ಮುಟ್ಟಲು ಹೋಗಬೇಡಿ. ಆಗಾಗ ಕೈಗಳಿಂದ ಮುಖವನ್ನು ಮುಟ್ಟಿ ಕೊಳ್ಳಬೇಡಿ, ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳಿ, ಬೇರೆಯವರ ಸೀನು ಹನಿಗಳು, ಕೆಮ್ಮು ಹನಿಗಳು ನಿಮ್ಮ ಮೂಗು ಬಾಯಿಯೊಳಗೆ ಹೋಗದಂತೆ ಬಟ್ಟೆಯಿಂದ ಮುಚ್ಚಿಕೊಳ್ಳಿರಿ, ಅಶಕ್ತರು, ರೋಗಿಗಳು, ಮುದುಕರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರಲೇಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸಲಹೆ ನೀಡಿದೆ.

ಜೂನ್ 8ನೇ ತಾರೀಖಿನಿಂದ ಚರ್ಚುಗಳ ಬಾಗಿಲುಗಳನ್ನು ತೆರೆಯಬಹುದಾದರೂ ಜನಜಂಗುಳಿ ಇರಬಾರದೆಂದು ಸರಕಾರ ತಿಳಿಸುತ್ತಿದೆ. ದೇವಾಲಯಕ್ಕೆ ಒಬ್ಬೊಬ್ಬರೇ ಹೋಗಿ ಜಪ ಮಾಡಿ ಬರಲು ಅಭ್ಯಂತರವಿಲ್ಲ. ಇಂಥ ಸಂದರ್ಭದಲ್ಲಿ ನಮ್ಮೆಲ್ಲರ ಕ್ಷೇಮಕ್ಕಾಗಿ ನಾವುಗಳು ಪಾಲಿಸಬೇಕಾದ ಮುಂಜಾಗ್ರತೆಗಳನ್ನು ಇಲ್ಲಿ ಕೊಡಲಾಗಿದೆ.

 1. ನೂಕುನುಗ್ಗಲಾಗದಂತೆ ಬಲಿಪೂಜೆಗೆ ಮುಂಚಿತವಾಗಿಯೇ ಬನ್ನಿ.

 2. ಸ್ಯಾನಿಟೈಸರ್ ನಿಂದ ಕೈ ಶುದ್ಧಗೊಳಿಸಿಕೊಳ್ಳಿರಿ.

 3. 10 ವರ್ಷಕ್ಕಿಂತಲೂ ಕಡಿಮೆ ಇರುವ ಮಕ್ಕಳು ಮತ್ತು 65ಕ್ಕೆ ಮೇಲ್ಪಟ್ಟ ವೃದ್ದರು ಬಲಿಪೂಜೆಯಲ್ಲಿ ಭಾಗವಹಿಸಬೇಡಿ.

 4. ದೇವಾಲಯದಲ್ಲಿ ಸಾಮಾಜಿಕ ಅಂತರ ಪಾಲಿಸಿರಿ.

 5. ಒಬ್ಬರೇ ವಾಚನಗಳನ್ನು, ಕೀರ್ತನೆ ಮತ್ತು ವಿಶ್ವಾಸಿಗಳ ಪ್ರಾರ್ಥನೆಯನ್ನು ಓದುವುದು.

 6. ಶಿಲುಬೆ ಗುರುತು ಹಾಕಲು ತೀರ್ಥದಾನಿ ಮತ್ತು ಬಲಿಪೂಜೆಯಲ್ಲಿ ತೀರ್ಥಪ್ರೊಕ್ಷಣೆ ಇರುವುದಿಲ್ಲ.

 7. ದೇವಾಲಯದಲ್ಲಿ ಭಕ್ತಾದಿಗಳು ದೂರ ದೂರ ಇರಬೇಕು.

 8. ಸ್ವರೂಪಗಳನ್ನು, ಬೆಂಚು, ಕುರ್ಚಿಗಳನ್ನು, ಬಾಗಿಲನ್ನು ಮುಟ್ಟಬಾರದು.

 9. ಪರಿಸ್ಥಿತಿ ತಿಳಿಯಾಗುವವರೆಗೆ ಪಾಪನಿವೇದನೆ ಸಂಸ್ಕಾರ ಇರುವುದಿಲ್ಲ.

 10. ಹಾಡು-ಜಪಗಳಿಗೆ ಸಾಧ್ಯವಾದಷ್ಟೂ ನಿಮ್ಮದೇ ಪುಸ್ತಕ, ಮೊಬೈಲ್ ಅಥವಾ ಟ್ಯಾಬ್ ಗಳನ್ನು ಬಳಸುವುದು.

 11. ತೆರೆದ ಬುಟ್ಟಿಗಳಲ್ಲಿ ಕೈ ತಾಗಿಸದೆ ಕಾಣಿಕೆ ಹಾಕುವುದು.

 12. ಪರಮಪ್ರಸಾದವನ್ನು ಹಸ್ತದ ಮೇಲೆ ಕೊಡಲಾಗುವುದು.

 13. ಗುರುಗಳು ಯಾರನ್ನೂ ಮುಟ್ಟಿ ಆಶೀರ್ವದಿಸುವಂತಿಲ್ಲ.

 14. ಭಕ್ತಾದಿಗಳು ದೇವಾಲಯದೊಳಗೆ ಮುಖಗವಸು ಧರಿಸಿಕೊಂಡೇ ಇರಬೇಕು.

 15. ಕೆಮ್ಮು-ಸೀನು ಇರುವವರು ದೇವಾಲಯದೊಳಗೆ ಬಾರದಿರಿ.

 16. ಯಾರಿಂದಲೂ ಮೇಣದಬತ್ತಿ, ಬೆಂಕಿಪೊಟ್ಟಣ, ಹೂವು, ಹಾಡಿನ ಪುಸ್ತಕ ಮುಂತಾದ ಏನನ್ನೂ ತೆಗೆದುಕೊಳ್ಳಬಾರದು.

 17. ಒಂದು ಪುಟ್ಟ ಸ್ಯಾನಿಟೈಸರ್‌ ಬಾಟಲಿ ಬಳಸಿರಿ.

 18. ದೇವಾಲಯದ ಆವರಣದಲ್ಲಿ ಗುಂಪುಗೂಡಿ ನಿಲ್ಲಬೇಡಿ.

 19. ಯಾರನ್ನೂ ತಬ್ಬಿ-ಕೈ ಕುಲುಕಿ ವಂದಿಸಬೇಡಿ.

 20. ಮುಂದಿನ ಆದೇಶದವರೆಗೆ ಧರ್ಮೋಪದೇಶ ತರಗತಿಗಳು, ಪ್ರಾರ್ಥನಾಕೂಟಗಳು ಮತ್ತು ಯಾವುದೇ ಸಭೆಗಳು ಇರುವುದಿಲ್ಲ.

ಸಹಿ/-