ಸಂತಸ ಇಮ್ಮಡಿಗೊಳಿಸುವ ರಹಸ್ಯ

ಒಮ್ಮೆ ಬೆಟ್ಟದ ಮೇಲಿದ್ದ ‘ದಯೆ’ ಎಂಬ ದೇವಾಲಯದಲ್ಲಿ ‘ಜಾಗೃತ’ ಮತ್ತು ‘ಮಬ್ಬು’ ಎಂಬ ಇಬ್ಬರು ಸನ್ಯಾಸಿಗಳಿದ್ದರು. ಪ್ರತಿದಿನ ಇಬ್ಬರೂ ದಾನ ಪಡೆಯಲು ಹತ್ತಿರದ ಹಳ್ಳಿಗಳನ್ನು ಸಂಧಿಸುತ್ತಿದ್ದರು. ‘ಮಬ್ಬು’ ತಾನು ಪಡೆದುದನ್ನು ದೇವಾಲಯದಲ್ಲಿ ಶೇಖರಿಸಿ ಇನ್ನೂ ಬಹಳ ದಿನಗಳಿಗೆ ಸಾಕಷ್ಟು ಸಾಮಾಗ್ರಿಗಳು ಇರುವುದನ್ನು ನೋಡಿ ಸೋಮಾರಿಯಾದ. ‘ಜಾಗೃತ’ ಪ್ರತಿದಿನ ಹೋಗಿ ಬರುತ್ತಿದ್ದರೂ ಏನೂ ತರುತ್ತಿರಲಿಲ್ಲ ಆದರೆ ಆತನ ಮುಖದಲ್ಲಿ ಸದಾ ಸಂತಸದ-ಸಮಾಧಾನದ ಮುಗುಳ್ನಗೆ ಇತ್ತು. ಸಾಮಾಗ್ರಿಗಳು ಮುಗಿಯುತ್ತಾ ಬರಲು ‘ಮಬ್ಬು’ ಆತಂಕಕ್ಕೆ ಒಳಗಾದ. ‘ಜಾಗೃತ’ನನ್ನು ಕೇಳಿದ, ‘ನೀನು ಪಡೆಯುವ ದಾನವೆಲ್ಲಾ ಏನಾಗುತ್ತಿದೆ?” ‘ಜಾಗೃತ’ ಉತ್ತರಿಸಿದ, “ದಾನವೆಲ್ಲಾ ಕರುಣೆಯಾಗುತ್ತಿದೆ. ಕರುಣೆ ಹೃದಯದಿಂದ ಹುಟ್ಟಿ ಹೃದಯವನ್ನು ಸೇರುತ್ತಿದೆ”. ಏನೂ ಅರ್ಥವಾಗದ ‘ಮಬ್ಬು’ ಮರುದಿನ ತಾನು ‘ಜಾಗೃತ’ನೊಂದಿಗೆ ಜೊತೆಗೂಡುವುದಾಗಿ ಹೇಳಿದ. ಮರುದಿನ ದಾರಿಯಲ್ಲಿ ಅನೇಕರು ‘ಜಾಗೃತ’ನನ್ನು ಗುರುತುಹಚ್ಚಿ ಆತನಿಗೆ ದಾನವನ್ನು ನೀಡುತ್ತಿದ್ದರು, ಇದನ್ನು ಕಂಡು ‘ಮಬ್ಬು’ ಇನ್ನೂ ಬಹಳ ದಿನಗಳಿಗೆ ಬೇಕಾದಷ್ಟು ಸಾಮಾಗ್ರಿಗಳು ದೊರಕಿವೆ ಎಂದು ಸಂತೋಷಪಟ್ಟ. ಆದರೆ ಇನ್ನಿತರರು ಬೇಡಿ ಬಂದಾಗ ‘ಜಾಗೃತ’ ಅದೆಲ್ಲವನ್ನು ಕ್ಷಣ ಮಾತ್ರದಲ್ಲಿ ಕೊಟ್ಟುಬಿಟ್ಟ. ‘ಮಬ್ಬು’ ಕೋಪಗೊಂಡು ‘ಜಾಗೃತ’ನನ್ನು ಖಂಡಿಸಲು ಪ್ರಾರಂಭಿಸಿದ ಆದರೆ ‘ಜಾಗೃತ’ ಶಾಂತವಾಗಿ ಹೀಗೆ ಹೇಳಿದ:

“ಸಂತೋಷಕ್ಕೆ ದಾರಿ ಶೇಖರಣೆ ಅಲ್ಲ, ಕೊಡುವುದು; ಕೊಟ್ಟಷ್ಟು ಅಧಿಕವಾಗುವುದು ಸಂತೋಷ ಮಾತ್ರ. ಪ್ರಕೃತಿಯನ್ನು ನೋಡು, ಸೂರ್ಯೋದಯ-ಸೂರ್ಯಾಸ್ತ, ಗಿಡ-ಮರ-ಬಳ್ಳಿ, ನದಿ-ತೊರೆ-ಹಳ್ಳ, ಸಮುದ್ರ-ಸಾಗರ, ಬೆಟ್ಟ-ಗುಡ್ಡಗಳ ಮೂಲಕ ದೇವರು ‘ನೀಡುವುದು’ ಹೇಗೆ ಎಂಬುದನ್ನು ತೋರಿಸಿದ್ದಾರೆ. ನೀನು ‘ಕೊಡುವಾಗ’ ದಾನ ಕರುಣೆಯಾಗಿ ಮಾರ್ಪಡುತ್ತದೆ, ಕೊಟ್ಟದ್ದು ಸಕಾಲದಲ್ಲಿ ನಿನಗೆ ಹಿಂತಿರುಗುತ್ತದೆ”.

‘ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ’ ಎಂಬುದು ಗಾದೆ ಮಾತು. ನಮ್ಮ ಸಂಪಾದನೆ, ಸಂಗ್ರಹ, ಉಳಿತಾಯ ಎಲ್ಲವೂ ನಮ್ಮ ಸೌಕರ್ಯಗಳಿಗಾಗಿ. ಅವುಗಳನ್ನು ಅತಿಯಾಗಿ ಶೇಖರಿಸುವುದು ಇತರರಿಗೆ ಅವು ಅಲಭ್ಯವಾಗಿಸಿದಂತೆ. ನಮ್ಮಲ್ಲಿರುವುದನ್ನೆಲ್ಲಾ ನೀಡಬೇಕೆಂದೇನಿಲ್ಲ ಆದರೆ, ಅವಶ್ಯಕತೆಗೂ ಮೀರಿ ಸಂಗ್ರಹಿಸುವುದು ಸರಿಯಲ್ಲ. ಅಂತೆಯೇ, ದಾನಧರ್ಮದಿಂದ ವಿಶ್ವದ ಒಡೆಯ ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ. ನಮಗೆ ಬಂದಿರುವ ಭಾಗ್ಯ ನಮ್ಮ ಬುದ್ದಿವಂತಿಕೆಯಿಂದ, ಶ್ರಮದಿಂದ ಅಥವಾ ಹಿರಿಯರಿಂದ ಬಂದಿರುವ ಬಳುವಳಿಯೂ ಆಗಿರಬಹುದು. ಅದನ್ನು ಉಳಿಸಿ-ಬೆಳೆಸುವುದು ಒಂದು ಕಡೆಯಾದರೆ ಅದನ್ನು ನ್ಯಾಯಯುತವಾಗಿ ಬಳಸುವುದು ಕೂಡ ಮುಖ್ಯ. ನಮ್ಮ ಸ್ವಂತ ಆಸ್ತಿ ನಮ್ಮದೇ ಆದರೂ, ಅದನ್ನು ನಾವೊಬ್ಬರೆ ಬಳಸಲು ಸಾಧ್ಯವಿಲ್ಲ. ಅದರಲ್ಲಿ ಸಮಾಜದಲ್ಲಿರುವವರ ಪಾಲೂ ಇದೆ. ಅದು ಸಂಬಂಧಿಕರಾಗಿರಬಹುದು, ಸ್ನೇಹಿತರಾಗಿರಬಹುದು, ನೆರೆಯವರಾಗಿರಬಹುದು ಅಥವಾ ಭಿಕ್ಷುಕರಾಗಿರಬಹುದು ಅವರಿಗೂ ಅದರಲ್ಲಿ ಪಾಲಿದೆ; ಹೇಗೆಂದರೆ, ನಮ್ಮೊಂದಿಗೆ ಜೀವಿಸುತ್ತಿದ್ದಾರೆ ಎಂಬುದಷ್ಟೆ. ನಾವು ಗಳಿಸಿದ್ದನ್ನೆಲ್ಲಾ ನಾವೇ ಉಪಯೋಗಿಸಲು ಆಗದು, ಅಷ್ಟೇ ಅಲ್ಲ, ನಮಗೆ ಅಗತ್ಯವಿರುವ ಬೇರೆ ವಿಷಯಗಳಿಗಾಗಿ ನಾವು ಇತರರನ್ನು ಆಶ್ರಯಿಸಲೇಬೇಕು. ಆದುದರಿಂದ, ಈ ಸಮಾಜ ಎಂಬುದು ವೃತ್ತದಂತೆ, ಈ ವೃತ್ತದಲ್ಲಿ ಎಲ್ಲರೂ ಅಗತ್ಯ, ಒಬ್ಬರನ್ನು ತೆಗೆದರೂ ವೃತ್ತ ಪೂರ್ಣವಾಗದು. ನಾವು ಮಾಡುವ ಒಳ್ಳೆಯ ಕಾರ್ಯಗಳು ನಮಗೆ ಹಿಂತಿರುಗುತ್ತವೆ ಎಂಬುದಕ್ಕಾಗಿ ಮಾಡುವುದಲ್ಲ, ಬದಲಿಗೆ, ನಮ್ಮಲ್ಲಿರುವುದನ್ನು ಹಂಚಿಕೊಳ್ಳುವಾಗ ನಾವು ಮಾನವರು ಎಂಬುದನ್ನು ಸಾಧಿಸಿ ತೋರಿಸುತ್ತೇವೆ, ಇದೇ ನಮ್ಮ ಸಂತಸವನ್ನು ಹೆಚ್ಚಿಸುವ ರಹಸ್ಯ.

ಫಾ. ವಿಜಯರಾಜ್ ಮೈಸೂರು