“ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ” (ಯೋವಾ ೧೫:೧೩). ಆನಂತರ ಸ್ವಲ್ಪ ಸಮಯದಲ್ಲೇ ಈ ಮಾತನ್ನು ಮಹಾಗುರುವು ಶತ್ರುಗಳ ಕೈಗೆ ಒಪ್ಪಿಸಿಕೊಡಲ್ಪಟ್ಟು ಶಿಲುಬೆ ಯಾತನೆಯನ್ನು ಅನುಭವಿಸಿ, ಮಡಿದು ಈಡೇರಿಸುವುದರಲ್ಲಿದ್ದರು.
ಕ್ರಿಸ್ತನ ಶಿಲುಬೆಯ ಬಗ್ಗೆ ತಿಳಿದುಕೊಳ್ಳುವ ಮುನ್ನ ಸಾಮಾನ್ಯ ಶಿಲುಬೆಯ ಬಗ್ಗೆ ತಿಳಿದುಕೊಳ್ಳೊಣ. ಗ್ರೀಕ್ ಭಾಷೆಯಲ್ಲಿ ಶಿಲುಬೆಯನ್ನು “ಸ್ತಾವ್ರುಸ್” ಅರ್ಥಾತ್ ಮೊನಚಾದ, ಭೂಮಿಯಲ್ಲಿ ಹೂತು ನಿಲ್ಲಿಸಿರುವ ಮರದ ತುಂಡು, ಸಾಮಾನ್ಯವಾಗಿ ಬೇಲಿಗಳಿಗೆ ಉಪಯೋಗಿಸುವ ಮರದ ಕಂಬ. ಆನಂತರ ಇದೇ ಶಬ್ದವನ್ನು ಗ್ರೀಕ್ ಭಾಷೆಯಲ್ಲಿ ಮರಣದಂಡನೆಯನ್ನು ನೀಡಲು ಉಪಯೋಗಿಸುವ ಶಿಲುಬೆಗೆ ನೀಡಲಾಯಿತು. ಅನೇಕ ಬಾರಿ ಒಂದೇ ಕಂಬವನ್ನು ಶಿಲುಬೆಯಾಗಿ ಪ್ರಯೋಗಿಸಿದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಆದರೆ ಬಹುವಾಗಿ ಉಪಯೋಗಿಸಿದ್ದು ಎರಡು ಮರಗಳನ್ನು ಅಡ್ಡವಾಗಿ ಬಳಸಿ ಇಂಗ್ಲೀಷ್ ನ ’ಎಕ್ಸ್’ (X)ಅಥವಾ ’ಟಿ’(T) ಅಥವಾ ’ವೈ’(Y) ಆಕಾರದಲ್ಲಿ ಬಳಸುತ್ತಿದ್ದುದು. ಈ ರೀತಿಯ ಕ್ರೂರ ಮರಣದಂಡನೆಯನ್ನು ಫೋಯಿನಿಶಿಯನ್ನರು, ಈಜಿಪ್ಟ್ ನರು, ಪರ್ಷಿಯನ್ನರು, ಕಾರ್ಥೆಜಿಯನ್ನರು, ಗ್ರೀಕರು ಮತ್ತು ರೋಮನ್ನರು ತಮ್ಮ ಊಳಿಗದವರಿಗೆ, ಜೀತದಾಳುಗಳಿಗೆ, ಪರದೇಶಿಗಳಿಗೆ ಮತ್ತು ದೇಶದ್ರೋಹಿಗಳಿಗೆ ನೀಡುತ್ತಿದ್ದರು. ಹೀಗೆ ಮೊಳೆಗಳಿಂದ ಜಡಿದು ಅಥವಾ ಕಟ್ಟಿಹಾಕಿ ನಗರದ ಬೀದಿಗಳಲ್ಲಿ, ಊರದ್ವಾರದಲ್ಲಿ, ಜನಸಂದಣಿ ಇರುವೆಡೆಯಲ್ಲಿ ಶಿಲುಬೆಗೆ ಹಾಕುವುದು ಮಾನಹಾನಿ ಮತ್ತು ಪ್ರಾಣಹರಣ ಮಾಡಲು ಹಾಗೂ ಇತರರಲ್ಲಿ ಭಯ ಹುಟ್ಟಿಸಲು. ಅಪರಾಧಿಗಳು ತಮ್ಮ ಶಿಲುಬೆಯನ್ನು ಅಂದರೆ ಅಡ್ಡವಾಗಿ ಉಪಯೋಗಿಸಲ್ಪಡುವ ಮರದ ನೊಗವನ್ನು ಶಿಲುಬೆಗೇರಿಸುವ ಸ್ಥಳಕ್ಕೆ ತಾವೇ ಹೊತ್ತು ನಡೆಯಬೇಕಿತ್ತು.
ಶುಭಸಂದೇಶ ಬರಹಗಾರರು ಈ ವಿಷಯವಾಗಿ ಬರೆಯುವಾಗ ಬಹಳ ಎಚ್ಚರಿಕೆಯಿಂದ ಯೇಸುಸ್ವಾಮಿಯ ಮಾತುಗಳನ್ನು ಬರೆದಿಡುತ್ತಾರೆ. (“ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸುವವನು ನನ್ನವನಾಗಲು ಯೋಗ್ಯನಲ್ಲ”) ಮತ್ತಾ ೧೦:೩೮, ೧೬:೨೪, ಮಾರ್ಕ ೮:೩೪, ಲೂಕ ೯:೨೩, ೧೪:೨೭ ರಲ್ಲಿ ನಾವು ಓದುವಂತೆ ಕ್ರಿಸ್ತರ ಕರೆಯನ್ನು ನಮೂದಿಸುತ್ತಾರೆ. ಆದರೆ, ಈ ಎಲ್ಲಾ ವಾಕ್ಯಗಳಲ್ಲಿ ಬರುವ ಶಿಲುಬೆ ಕ್ರಿಸ್ತರ ಶಿಲುಬೆ ಅಲ್ಲ ಎಂಬುದನ್ನು ಗಮನಿಸಬೇಕು. ಕ್ರಿಸ್ತರನ್ನು ಶಿಲುಬೆಗೆ ಏರಿಸಿದ ನಂತರ ಶಿಲುಬೆಯ ಬಗೆಗಿನ ಅನಿಸಿಕೆಯೇ ಇತಿಹಾಸದಲ್ಲಿ ಬದಲಾಗುವುದನ್ನು ನಾವು ಗಮನಿಸಬಹುದು. ಇದು ಸಮಂಜಸ ಕೂಡ. ಮರಣದಂಡನೆ ನೀಡಲು ರೋಮನ್ನರ ಬಳಿ ಇನ್ನೂ ಅನೇಕ ರೂಢಿಗಳು, ಸಾಮಾಗ್ರಿಗಳು ಇದ್ದವು ಆದರೂ ಶಿಲುಬೆ ಮತ್ತು ಅದರ ಮೇಲೆ ಕ್ರಿಸ್ತರ ಮರಣದ ಮಹತ್ವ ಮಾತ್ರ ಇಂದಿಗೂ ಉಳಿಯಿತು.
ಕ್ರಿಸ್ತರ ಶಿಲುಬೆಯ ಮರಣವನ್ನು ಶುಭಸಂದೇಶದಲ್ಲಿ ನಾವು ಓದುವಂತೆ; ಯೇಸುಸ್ವಾಮಿಯ ಹೆಗಲ ಮೇಲೆ ನೊಗವನ್ನು ಹೊರೆಸಲಾಯಿತು (ಯೋವಾ ೧೯:೧೭), ಸ್ವಾಮಿಯು ಶಕ್ತಿ ಕುಂದಿದವರಾದುದರಿಂದ ಪರದೇಶಿ ಸಿರೇನ್ಯದ ಸಿಮೋನನಿಗೆ ಬಲಾತ್ಕಾರದಿಂದ ಕ್ರಿಸ್ತರ ಶಿಲುಬೆಯನ್ನು ಹೊರಿಸಲಾಯಿತು (ಮತ್ತಾ ೨೭:೩೨, ಮಾರ್ಕ ೧೫:೨೧, ಲೂಕ ೨೩:೨೬), ಸ್ವಾಮಿಯನ್ನು ಅವಮಾನ ಪಡಿಸಲು ಶಿಲುಬೆಯ ಮೇಲೆ “ನಜರೇತಿನ ಯೇಸು, ಯೆಹೂದ್ಯರ ಅರಸ” ಎಂಬ ಫಲಕವನ್ನು ತೂಗುಹಾಕಲಾಯಿತು (ಯೋವಾ ೧೯:೧೯), ಶಿಲುಬೆಯ ಸುತ್ತ ಶತ್ರುಗಳು, ಇತರರು ನಿಂತಿದ್ದರು (ಮತ್ತಾ ೨೭:೩೯, ಯೋವಾ ೧೯:೨೫), ಪ್ರಾಣಾರ್ಪಣೆ ಮಾಡುವ ಸಮಯದಲ್ಲೂ ತಮ್ಮ ಶಕ್ತಿಯನ್ನು ಚಮತ್ಕಾರದ ಮೂಲಕ ತೋರಿಸಿ ಶಿಲುಬೆಯ ಮೇಲಿಂದ ಇಳಿದು ಬರುವಂತೆ ಮೂದಲಿಸಿದರು (ಮತ್ತಾ ೨೭:೪೦, ೪೨, ಮಾರ್ಕ ೧೫:೩೦,೩೨), ಕ್ರಿಸ್ತರು ಶಿಲುಬೆಯ ಮೇಲೆ “ಎಲ್ಲಾ ನೆರವೇರಿತು” ಎಂದು ಹೇಳಿ ಕೊನೆಯುಸಿರೆಳೆದರು (ಯೋವಾ ೧೯:೩೦).
ಕ್ರಿಸ್ತ ನಮಗಾಗಿ ಶಿಲುಬೆಯ ಮೇಲೆ ಮಡಿದುದು ಸೂರ್ಯನಷ್ಟೇ ಸತ್ಯ, ಆದರೆ ಆ ಸಾವಿಗೆ ಮಹತ್ವ ದೊರಕಿದ್ದು ಯೇಸುಸ್ವಾಮಿ ನುಡಿದಂತೆ ನಡೆದದರಿಂದ, ದೈವನಿಷ್ಟೆಯ ಬದುಕಿನಿಂದ ಮತ್ತು ದೈವ-ಮಾನವನಾದುದರಿಂದ: “ಮನುಷ್ಯಪುತ್ರ ಬಂದುದು ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೆ” (ಮತ್ತಾ ೨೦:೨೮, ಮಾರ್ಕ ೧೦:೪೫, ೧ ತಿಮೋ ೨:೬).
ಅನೇಕರು ಶಿಲುಬೆಯ ಮೇಲೆ ಸತ್ತಿದ್ದರೂ ಯೇಸುಸ್ವಾಮಿಯ ಮರಣ ವಿಭಿನ್ನವಾಗಿತ್ತು. ಅವರು ತಮ್ಮ ತಪ್ಪಿಗಾಗಿ ಅಲ್ಲ: ಸಮಾಜದಲ್ಲಿದ್ದ ಅನೇಕ ನತದೃಷ್ಟ ಜನರಿಗಾಗಿ, ಆಗಿದ್ದ ಅನ್ಯಾಯದ, ಸ್ವಾರ್ಥದ ರಾಜಕೀಯದಿಂದಾಗಿ ಸಾವಿಗೆ ತುತ್ತಾದರು. ಹೀಗೆ, ಸಾಮಾಜಿಕ ಬಂಧನಕ್ಕೆ ಕಾರಣ ಆಧ್ಯಾತ್ಮಿಕ ಬಂಧನ ಎಂಬುದನ್ನು ತೋರಿಸಿಕೊಡಲು ಮಾತ್ರವಲ್ಲ ಪರಪ್ರೀತಿಯ ಪರಾಕಾಷ್ಟೆಯನ್ನು ವ್ಯಕ್ತಪಡಿಸಲು ಅವರು ಹೀಗೆ ತಮ್ಮನ್ನೇ ದೇವರ ಚಿತ್ತಕ್ಕೆ ಒಪ್ಪಿಸಿಕೊಟ್ಟರು. ಇಷ್ಟೇ ಅಲ್ಲ, ಶಿಲುಬೆಗೆ ಮಹತ್ವ ದೊರಕಿದ್ದಕ್ಕೆ ಮತ್ತೊಂದು ಮುಖ್ಯ ಕಾರಣ ಯೇಸುಸ್ವಾಮಿ ಶಿಲುಬೆಯ ಮೇಲೆ ಕಡೆಯದಾಗಿ ನುಡಿದ ನುಡಿ: “ಎಲ್ಲಾ ನೆರವೇರಿತು” (ಯೋವಾ ೧೯:೩೦). ಈ ಪದ ತೆತೆಲೆಸ್ತಾಯ್ ಎಂಬ ಗ್ರೀಕ್ ಪದವನ್ನು ಪೂರ್ಣ ಭೂತಕಾಲದಲ್ಲಿ ಬರೆಯಲಾಗಿದೆ. ಪೂರ್ಣ ಭೂತಕಾಲದ ವಿಶೇಷತೆಯೆಂದರೆ, ಕ್ರಿಯೆಯು ಪೂರ್ಣಗೊಂಡರು ಅದರ ಪರಿಣಾಮ ಇನ್ನೂ ಮುಂದುವರಿಯುವುದು. ಕ್ರಿಸ್ತನ ಈ ಕಡೆಯ ಹೇಳಿಕೆ ಕೂಡ ಹಾಗೆಯೇ, ಅವರ ಶಿಲುಬೆಯ ಮರಣ ಅಂದೇ ಕೊನೆಗೊಂಡರು ಅದರ ಪರಿಣಾಮವಾದ ಪಾಪಕ್ಷಮೆ, ನಿತ್ಯಜೀವ ಅಂದರೇ ನೈಜ ಪ್ರೀತಿಯ, ಅನ್ಯೋನ್ಯ ಜೀವನದ ಮುನ್ನುಡಿ ಇನ್ನೂ ನೆರವೇರಿರುತ್ತಿರುವುದು.
ಆದುದರಿಂದ, ಕ್ರಿಸ್ತನ ಶಿಲುಬೆಯ ಮರಣದ ಪರಿಣಾಮ ಕೇವಲ ಈ ಲೋಕದ ಜೀವನಕ್ಕೆ ಸಂಬಂಧಿಸಿದ್ದಲ್ಲ, ಅದು ನಿತ್ಯಜೀವಕ್ಕೂ ಮುಂದುವರಿಯುವಂತದ್ದು. ಕ್ರಿಸ್ತನ ಶಿಲುಬೆಯ ಮರಣದ ಸ್ಮರಣೆಯಾದ ಪೂಜ್ಯ ಬಲಿಪೂಜೆ ನಮ್ಮ ಪ್ರತಿದಿನದ ಯೋಗ್ಯ ಜೀವನಕ್ಕೆ ಸ್ಮಾರಕ. ದೇವಾಲಯದಲ್ಲಿ, ಮನೆಗಳಲ್ಲಿ ಇರಿಸಿರಿರುವ ಶಿಲುಬೆ ನಮಗೆ ಕ್ರಿಸ್ತನ ತ್ಯಾಗದ ಸ್ಮರಣೆ. ಅದು ವಿಗ್ರಹವಲ್ಲ, ಬೆಲೆಕಟ್ಟಲಾಗದ ಅಪರಿಮಿತ ಪ್ರೀತಿಯ ಗುರುತು. ಅಂತಹ ಶಿಲುಬೆಯನ್ನು ಕೊರಳಿಗೆ ಏರಿಸಿ ಅದಕ್ಕೆ ವ್ಯತಿರಿಕ್ತವಾಗಿ ಬಾಳುವುದಾದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುತ್ತೇವೆ, ಕ್ರಿಸ್ತರ ಮಾತುಗಳಲ್ಲಿ ಹೇಳುವುದಾದರೆ, “ಉಪ್ಪೇ ಸಪ್ಪಗಾದರೇ ಅದಕ್ಕೆ ಎಲ್ಲಿಂದ ರುಚಿ ದೊರಕೀತು…” ಕ್ರಿಸ್ತನ ಶಿಲುಬೆಯ ಮರಣದ ಪರಿಣಾಮವನ್ನು ಸವಿಯುತ್ತಿರುವ ಪ್ರತಿಯೊಬ್ಬ ಕ್ರೈಸ್ತನು ಕ್ರಿಸ್ತನಿಗೆ, ಅವರನ್ನು ಕಳುಹಿಸಿದ ಪಿತನಿಗೆ, ಈ ಜ್ಞಾನವನ್ನು ನೀಡಿದ ಪವಿತ್ರಾತ್ಮರಿಗೆ ಋಣಿಗಳಾಗಿರಬೇಕು. ಸರ್ವವನ್ನು ಕ್ರಿಸ್ತನ ಮಹಿಮೆಗಾಗಿ ಮಾಡುವಂತಾಗಬೇಕು.
ಜೈ ಕ್ರಿಸ್ತ. ಫಾ ವಿಜಯರಾಜ್ ಜೋನೆ, ಮೈಸೂರು
(ಈ ನನ್ನ ಬರವಣಿಗೆ www.christinyou.net/pages/crosschrst.html ನಲ್ಲಿ ಕಂಡುಬಂದ ಜೇಮ್ಸ್ ಎ. ಫ್ಲವರ್ ರವರ “ದಿ ಕ್ರಾಸ್ ಆಫ್ ಕ್ರೈಸ್ಟ್” ಎಂಬ ಲೇಖನದಿಂದ ಸ್ಪೂರ್ತಿ ಪಡೆದದ್ದು).