ಮನುಷ್ಯ ಪುರುಷನಾಗಲಿ-ಸ್ತ್ರೀಯಾಗಲಿ, ಬಡವನಿರಲಿ-ಧನಿಕನಿರಲಿ, ಓದು-ಬರಹ ಬರುವವನಿರಲಿ-ಬಾರದವನಿರಲಿ, ಜ್ಞಾನಿಯಾಗಿರಲಿ-ಅಜ್ಞಾನಿಯಾಗಿರಲಿ, ಮಗುವಾಗಲಿ-ವೃದ್ಧನಾಗಲಿ ಎಲ್ಲರಲ್ಲಿಯೂ ಇರುವ ಏಕೈಕ ಬಯಕೆ “ಸ್ವರ್ಗ”ವನ್ನು ಪಡೆಯಬೇಕು. ನಾವು ಸ್ವರ್ಗದ ನಾನಾ ಕಲ್ಪನೆಗಳನ್ನು ಹೊಂದಿರುತ್ತೇವೆ. ಸ್ವರ್ಗದ ಸರಳವಾದ ವ್ಯಾಖ್ಯಾನ, “ದೇವರು ಎಲ್ಲಿರುತ್ತಾರೋ, ಅದೇ ಸ್ವರ್ಗ, ಅರ್ಥಾತ್ ದೇವರೇ”. ಆಗ, ಮತ್ತೊಂದು ಮೂಲ ಪ್ರಶ್ನೆ, “ದೇವರು ಯಾರು?” ಸರಳವಾದ ಉತ್ತರ, “ನಮ್ಮನ್ನು ನಾವೀರುವ ಹಾಗೆಯೇ ಪ್ರೀತಿಸಿ ಸ್ವೀಕರಿಸುವ ಏಕಮಾತ್ರ ವ್ಯಕ್ತಿ”.
ಯೇಸುಸ್ವಾಮಿಯ ಬೋಧನೆಗಳಲ್ಲಿ ಅತ್ಯಂತ ಮುಖ್ಯವಾದ ವಿಷಯವೂ ಇದೇ: “ಸ್ವರ್ಗಸಾಮ್ರಾಜ್ಯ” ಅಥವಾ “ದೇವರ ಸಾಮ್ರಾಜ್ಯ”. ಸಂತ ಮತ್ತಾಯರು ಬರೆದ ಶುಭಸಂದೇಶದಲ್ಲಿ ಸ್ವರ್ಗಸಾಮ್ರಾಜ್ಯದ ಬಗ್ಗೆ ಯೇಸುಸ್ವಾಮಿ ಹೇಳಿದ ಮೂರು ಸಾಮತಿಗಳನ್ನು ಬರೆದಿಡಲಾಗಿದೆ: ಬೆಳೆ-ಕಳೆ, ಸಾಸಿವೆ ಗಿಡ ಮತ್ತು ಹುಳಿ ಹಿಟ್ಟಿನ ಸಾಮತಿಗಳು. ಇವುಗಳಲ್ಲಿ ಬಳಸಿರುವ ಉಪಮೆಗಳು ಸ್ವಾರಸ್ಯವಾದವು ಮಾತ್ರವಲ್ಲ, ಮೂರು ಸಾಮತಿಗಳು ಒಂದಕ್ಕೊಂದು ಹೆಣೆದುಕೊಂಡಿವೆ.
ಮನುಷ್ಯನ ಸರಾಸರಿ ಆಯಸ್ಸು ಸುಮಾರು ಎಪ್ಪತ್ತರಿಂದ ಎಂಭತ್ತು ಎಂದಾದರೆ, ಅಷ್ಟು ವರ್ಷಗಳಲ್ಲಿ ಮಾಡುವ ವಿದ್ಯಾಭ್ಯಾಸ, ಉದ್ಯೋಗ, ಸಂಪಾದನೆ, ಜೀವನದ ಧ್ಯೇಯಗಳು, ಕುಟುಂಬ, ಸಮಾಜ ಇತ್ಯಾದಿ ಇವೆಲ್ಲದರ ಹಿಂದಿರುವ ಉದ್ದೇಶ ಏನು? “ಸಂತೋಷ ಮತ್ತು ನೆಮ್ಮದಿ”. ಲೌಕೀಕವಾದ ವಿಷಯಗಳ ಮೂಲಕ ಶಾಶ್ವತವಾದ ಸಂತೋಷ-ನೆಮ್ಮದಿ ದೊರಕದು ಎಂದು ಮನುಷ್ಯನು ಅರಿತಿದ್ದಾನೆ. ಹಾಗಾದರೆ, ಶಾಶ್ವತವಾದ ಸಂತೋಷ–ನೆಮ್ಮದಿ ದೊರಕುವುದು ದೇವರಿಂದ; ಸ್ವರ್ಗದಲ್ಲಿ ಅರ್ಥಾತ್ ದೇವರ ಸನ್ನಿಧಿಯಲ್ಲಿ. ಈ ಶಾಶ್ವತ ಸಂತೋಷ ಮತ್ತು ನೆಮ್ಮದಿಯ ಮೇಲಿನ ಹಂಬಲವನ್ನು ದೇವರು ನಮ್ಮ ಮನಸ್ಸಿನಲ್ಲಿ ಇರಿಸಿದ್ದಾರೆ, ಅರ್ಥಾತ್, ದೇವರನ್ನು ಅರಸುವ, ದೇವರ ಅನುಭವ ಬೇಕೆನ್ನುವ, ಶಾಶ್ವತವಾದ ಸಂತೋಷ-ನೆಮ್ಮದಿಯನ್ನು ಪಡೆದುಕೊಳ್ಳುವ ಆಸೆಯನ್ನು ನಮ್ಮ ಹೃದಯದಲ್ಲಿಟ್ಟಿದ್ದಾರೆ. ಇದನ್ನು ಯೇಸುಸ್ವಾಮಿ ಹಿಟ್ಟಿಗೆ ಬೆರೆಸುವ ಹುಳಿಗೆ ಹೋಲಿಸುತ್ತಾರೆ. ರಾಶಿಯಂತಿರುವ ಹಿಟ್ಟನ್ನು ಕೊಂಚ ಹುಳಿ ಹುದುಗೆಬ್ಬಿಸುವಂತೆ ಸ್ವರ್ಗ ಬೇಕೆನ್ನುವ ಹಂಬಲ ನಮ್ಮ ಜೀವನವನ್ನು ಮಾರ್ಪಡಿಸಬಹುದು. ಈ ಪುಟ್ಟ ಆಸೆ ನಮ್ಮನ್ನು ಧಾರ್ಮಿಕರಾಗಬೇಕು, ಸಾತ್ವಿಕರಾಗಬೇಕು, ಜಪ-ತಪದಲ್ಲಿ ತೊಡಗಿಸಿಕೊಳ್ಳಬೇಕು, ಸದ್ಗುಣಗಳನ್ನು ಪಾಲಿಸಬೇಕು, ಪರೋಪಕಾರ ಮಾಡಬೇಕು ಎಂಬಿತ್ಯಾದಿ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ.
ಈ ಪ್ರೇರಣೆಗೆ ಸಾಂಗತ್ಯ ನೀಡುವುದು ನಮ್ಮ ಧರ್ಮ ಮತ್ತು ಧಾರ್ಮಿಕ ಆಚರಣೆಗಳು. ಇವು ನಮ್ಮನ್ನು ದೇವರ ಸನ್ನಿಧಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತದೆ. ಇದನ್ನು ಯೇಸುಸ್ವಾಮಿ ಎರಡನೇ ಸಾಮತಿಯಲ್ಲಿ ವಿಶಾಲವಾದ ಮರಕ್ಕೆ ಹೋಲಿಸುತ್ತಾರೆ. ಆ ಮರದಲ್ಲಿ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಗೂಡುಕಟ್ಟಿ ನೆಲೆಸುತ್ತವೆ ಎನ್ನುತ್ತಾರೆ. ಪ್ರಪಂಚದಲ್ಲಿರುವ ಧರ್ಮಗಳು ಈ ವಿಶಾಲ ವೃಕ್ಷದ ಕೊಂಬೆಗಳು, ಬೇರೆ ಬೇರೆ ಕೊಂಬೆಗಳಲ್ಲಿ ಪ್ರತಿಯೊಬ್ಬರೂ ಗೂಡು ಕಟ್ಟಿಕೊಳ್ಳುತ್ತಾರೆ, ಆದುದರಿಂದ, ಯಾರಿಗೂ ಈ ಧರ್ಮ, ಆ ಧರ್ಮ ಎಂದು ಹೋಲಿಕೆ ಮಾಡಿ ಹೆಚ್ಚುಗಾರಿಕೆ ಮೆರೆಯುವ ಅವಕಾಶವಿಲ್ಲ, ಎಲ್ಲರೂ ದೇವರ ಸನ್ನಿಧಿಯೆಂಬ ಸ್ವರ್ಗದ ವಿಶಾಲ ವೃಕ್ಷದಲ್ಲಿ ಒಂದೊಂದು ಕೊಂಬೆಯನ್ನು ಆಶ್ರಯಿಸಿಕೊಂಡಿದ್ದಾರಷ್ಟೇ. ಎಲ್ಲರಿಗೂ ತಮ್ಮ ಸನ್ನಿಧಿಯಲ್ಲಿ ನೆಲೆಸುವ ಸೌಭಾಗ್ಯವನ್ನು ಏರ್ಪಡಿಸರುವವರು ತಂದೆಯಾಗಿರುವ ದೇವರೇ!
ಆದರೆ, ಈ ಸತ್ಯಕ್ಕೆ ಆಗಿಂದಾಗ್ಗೆ ವ್ಯತಿರಿಕ್ತವಾದ ವಿಷಯವನ್ನು ಬೋಧಿಸುವ ಮತ್ತು ಅವುಗಳನ್ನು ಜನರ ಮೇಲೆ ಹೇರುವ ವಿಕೃತ ವ್ಯಕ್ತಿಗಳು ಇದ್ದಾರೆ ಎಂಬುದಾಗಿ ಒಳ್ಳೆಯ ಬೆಳೆಯ ಮಧ್ಯೆ ರಾತ್ರಿಯಲ್ಲಿ ಬಂದು ಕಳೆಯನ್ನು ಬಿತ್ತಿ ಹೋಗುವ ಶತ್ರುವಿನ ಬಗ್ಗೆ ಬೆಳೆ-ಕಳೆಯ ಸಾಮತಿಯಲ್ಲಿ ಯೇಸುಸ್ವಾಮಿ ಹೇಳುತ್ತಾರೆ. ದೇವರೇ ಎಲ್ಲರ ಸೃಷ್ಠಿಕರ್ತ ಮತ್ತು ರಕ್ಷಕ, ಆದರೆ, ತಮ್ಮ ಸ್ವಂತ ಆಲೋಚನೆಗಳು ಎಲ್ಲದಕ್ಕಿಂತಲೂ ಶ್ರೇಷ್ಠ ಎಂದು ಭಾವಿಸುವ ವ್ಯಕ್ತಿಗಳು ಅದೇ ವಿಷವನ್ನು ಇತರರ ಹೃದಯಗಳಲ್ಲಿ ಬಿತ್ತುತ್ತಾರೆ. ಇದೇ ಸಾಮತಿಯಲ್ಲಿ ಕಳೆಗಳನ್ನು ಈಗಲೇ ಕಿತ್ತುಬಿಡಬೇಕೇ ಎನ್ನುವ ಆಳುಗಳಿಗೆ ಯಜಮಾನ ಹೇಳುತ್ತಾನೆ, “ಕಳೆಯನ್ನು ಕೀಳುವಾಗ ಗೋಧಿಯನ್ನೂ ಕಿತ್ತುಬಿಟ್ಟೀರಿ, ಸುಗ್ಗಿಯವರೆಗೆ ಅವು ಒಟ್ಟಿಗೇ ಬೆಳೆಯಲಿ”. ಪ್ರಕೃತಿಯಲ್ಲಿ ಕಳೆ ಸಸ್ಯ ಬೆಳೆಯಾಗಲು ಅಸಾಧ್ಯ, ಆದರೆ, ಮಾನವರ ಹೃದಯದಲ್ಲಿರುವ “ಸ್ವರ್ಗ ಬೇಕು” ಎನ್ನುವ ಆಸೆ ಅವರನ್ನು ಮಾರ್ಪಡಿಸಲು ಸಾಧ್ಯ. ಇದನ್ನು ಮನುಷ್ಯರಿಗೆ ಹೋಲಿಸಿದರೆ ಕರುಣಾಮಯಿಯಾದ ದೇವರು ಒಳ್ಳೆಯ ಬೆಳೆಯಂತಿರುವ ಸಜ್ಜನರ ಮಧ್ಯೆ ಕಳೆಯಂತಿರುವ ದುರ್ಜನರನ್ನು ಒಮ್ಮೆಗೆ ತೆಗೆದುಬಿಡದೆ ಅನೇಕ ಅವಕಾಶಗಳನ್ನು ನೀಡಿ ತಮ್ಮನ್ನೇ ಮಾರ್ಪಡಿಸಿಕೊಳ್ಳಲು ಪ್ರೇರೇಪಿಸುತ್ತಾರೆ.
ಹೀಗೆ, “ಸ್ವರ್ಗ ಬೇಕು” ಎನ್ನುವ ಆಸೆ ಅಂತರಾಳದಿಂದಲೇ ಮನುಷ್ಯನನ್ನು ಮಾರ್ಪಡಿಸಿ, ಧರ್ಮ ಎನ್ನುವ ಶಾಲೆಯಲ್ಲಿ ವಿಶ್ವಾಸ–ಭಕ್ತಿಯೆಂಬ ಪಾಠಗಳನ್ನು ಕಲಿಸಿ, ಮನದಲ್ಲಿರುವ ಕಳೆಯಂತಹ ದುರ್ಗುಣಗಳನ್ನು ತೆಗೆದು ಫಲ ನೀಡುವ ಮೌಲ್ಯಗಳೆಂಬ ಬೆಳೆಯನ್ನು ಬೆಳೆಯುವಂತಾಗಿಸುತ್ತದೆ. ಯೇಸುಸ್ವಾಮಿ ಹೇಳಿದ ಈ ಸಾಮತಿಗಳು ನಮ್ಮ ಮತಿಯ ಅಂಧಕಾರವನ್ನು ನೀಗಿಸಿ ಜ್ಞಾನವನ್ನು ಪ್ರಖರವಾಗಿ ಬೆಳಗಿಸಿ, ದೇವರ ಸನ್ನಿಧಿ ಅಥವಾ ಸ್ವರ್ಗವನ್ನು ಸೇರಿಸಲಿ.
ಫಾ ವಿಜಯರಾಜ್, ಮೈಸೂರು