ಸ್ವಾತಂತ್ರ್ಯ

“ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು”, ಇದು ಬಾಲಗಂಗಾಧರ ತಿಲಕರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನೀಡಿದ ಘೋಷಣೆ. ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಆಜನ್ಮ ಸಿದ್ಧ ಹಕ್ಕು. ಸ್ವಾತಂತ್ರ್ಯ ಎಂದಾಕ್ಷಣ ಅದಕ್ಕೆ ಸರಿಯಾದ ವ್ಯಾಖ್ಯಾನವನ್ನು ಹುಡುಕುತ್ತೇವೆ, ಆದರೆ, ಅದಕ್ಕೆ ನೀಡುವ ಯಾವುದೇ ವ್ಯಾಖ್ಯಾನ ಅದನ್ನು ಸೀಮಿತಗೊಳಿಸಿ ಬಿಡುತ್ತದೆ.

ಒಂದು ದೇಶ ಸಾರ್ವಭೌಮತ್ವವನ್ನು ಸಾಧಿಸಬಹುದು, ಅದು ತನ್ನದೇ ಸಂವಿಧಾನವನ್ನೂ, ಕಾನೂನನ್ನೂ ರೂಪಿಸಿಕೊಳ್ಳಬಹುದು, ಆದರೆ,  ಅದರ ಪ್ರಜೆಗಳನ್ನು ಸ್ವತಂತ್ರರನ್ನಾಗಿಸಲು ಸಂವಿಧಾನಕ್ಕೂ, ಕಾನೂನಿಗೂ ಸಾಧ್ಯವಿಲ್ಲ, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿ ಅಪರಾಧದಿಂದಲೋ, ಬೇರೆ ಯಾವುದೋ ಕಾರಣದಿಂದ ಸೆರೆವಾಸದಲ್ಲಿರಬಹುದು, ಆದರೆ, ಆತ ದೈಹಿಕವಾಗಿಯಷ್ಟೇ ಬಂಧಿ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಅಂದರೆ, ಸ್ವಾತಂತ್ರ್ಯ ಮಾನಸಿಕವಾದುದು, ಆಧ್ಯಾತ್ಮಿಕವಾದುದು ಎಂದಂತಾಯಿತು.

ಸ್ವಾತಂತ್ರ್ಯವನ್ನು ಎಲ್ಲರೂ ಬಯಸುತ್ತಾರೆ, ಮಕ್ಕಳು ಆಡಲು ಬಯಸಿದರೆ, ಯುವಕರು ಸ್ನೇಹಿತರೊಂದಿಗೆ ಸುತ್ತಾಡಲೂ ಬಯಸುತ್ತಾರೆ, ವಯಸ್ಕರು ತಮ್ಮಿಚ್ಚೆಯಂತೆ ವೆಚ್ಚ ಮಾಡಲು ಬಯಸಿದರೆ, ವೃದ್ದರು ತಮ್ಮಿಚ್ಚೆಯಂತೆ ಇರಲು ಬಯಸುತ್ತಾರೆ. ಇದು ಆಯಾಯ ವಯಸ್ಸಿನಲ್ಲಾದರೆ, ಶಾಲೆಯಲ್ಲಿ, ವ್ಯಾಪಾರದಲ್ಲಿ, ಕೈಗಾರಿಕೆಯಲ್ಲಿ, ರಾಜಕಾರಣದಲ್ಲಿ; ಎಲ್ಲಾ ಜನಾಂಗಗಳಲ್ಲಿ, ಎಲ್ಲಾ ಸಮಯದಲ್ಲಿ, ಎಲ್ಲಾ ದೇಶಗಳಲ್ಲಿ ಸರ್ವರೂ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಸ್ವಾತಂತ್ರ್ಯವನ್ನು ಅನುಭವಿಸಬಹುದಾದರೂ ಅದನ್ನು ವ್ಯಾಖ್ಯಾನಿಸುವುದು ಕಷ್ಟ; ಕೆಲವರಿಗೆ, ಸ್ವಾತಂತ್ರ್ಯವೆಂದರೆ ಮನಸೋ ಇಚ್ಚೆ ಜೀವಿಸುವುದು, ಇನ್ನೂ ಕೆಲವರಿಗೆ, ಜವಾಬ್ದಾರಿಯಿಂದ ಜೀವಿಸುವುದು; ಮತ್ತೂ ಕೆಲವರಿಗೆ, ಸಮಭಾಗವಾಗಿ ಸ್ವೀಕರಿಸುವುದು; ಇತರರಿಗೆ, ಯಾರೂ ಪೂರ್ಣ ಸ್ವಾತಂತ್ರ್ಯಕ್ಕೆ ಅರ್ಹರಲ್ಲ, ಏಕೆಂದರೆ, ಅದನ್ನು ಬಳಸಿಕೊಳ್ಳುವುದಕ್ಕೆ ಅರಿತಿಲ್ಲ ಎನ್ನುವ ಇರಾದೆ ಇದೆ.

ಸ್ವಾತಂತ್ರ್ಯ ಹಕ್ಕು ಮತ್ತು ಹೊಣೆಗಾರಿಕೆಗಳೊಂದಿಗೆ ಬರುವುದಾದರೂ ಅವೆರಡನ್ನೂ ನಿಭಾಯಿಸುವುದು ಅಷ್ಟು ಸುಲಭವಲ್ಲ, ಅದರಲ್ಲೂ, ಅವೆರಡನ್ನೂ ಸರಿಸಮಾನಾಗಿ ಪಡೆದು-ಪಾಲಿಸುವುದು ದುಸ್ತರ. ಹಕ್ಕನ್ನು ಬಹಳವಾಗಿ ಬಳಸಿ, ಕೆಲ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಬಹುದು ಅಥವಾ ಹೊಣೆಗಾರಿಕೆಯನ್ನು ಇತರರ ಮೇಲೆ ಹೇರಿ ಕೆಲ ಹಕ್ಕುಗಳನ್ನು ಕೆಲವರಿಗೆ ಮಾತ್ರ ಎಂಬಂತೆ ಬಳಸಿಕೊಳ್ಳುವುದು ಉಂಟು. ಆದರೆ, ಸ್ವಾತಂತ್ರ್ಯ ಹಕ್ಕು ಮತ್ತು ಹೊಣೆಗಾರಿಕೆಗಳೆರಡನ್ನೂ ಒಳಗೊಂಡಿದೆ ಎಂಬುದು ಸೂರ್ಯನಷ್ಟೇ ಸತ್ಯ.

ಈ ಸ್ವಾತಂತ್ರ್ಯವನ್ನು ಎಲ್ಲರಿಗೂ ಸಮನಾಗಿ ದೊರಕುವಂತೆ ಮಾಡುವುದು ಪ್ರತಿ ಮನುಷ್ಯನ ಜವಾಬ್ದಾರಿ. ಆದರೆ, ಸ್ವಾತಂತ್ರ್ಯದ ಸರಿಯಾದ ಅರಿವು ಎಲ್ಲರಲ್ಲಿಯೂ ಬೇಕು. ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಪಾರ್ಲ್‍ ಎಂಬಲ್ಲಿ 27 ವರ್ಷಗಳ ಕಾಲ ಸೆರೆವಾಸದಲ್ಲಿದ್ದ ನೆಲ್ಸನ್‍ ಮಂಡೇಲರವರು ಸ್ವಾತಂತ್ರ್ಯ ಎಂದರೆ ಹೀಗೆನ್ನುತ್ತಾರೆ, “ಸರಪಳಿಗಳಿಂದ ಹೊರ ಬರುವುದೇ ಸ್ವಾತಂತ್ರ್ಯವಲ್ಲ, ಬದಲಿಗೆ, ಮತ್ತೊಬ್ಬರ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಜೀವಿಸುವುದೇ ನಿಜವಾದ ಸ್ವಾತಂತ್ರ್ಯ”. ಏಕೆಂದರೆ, ನಮಗೆ ಅರಿವಿಲ್ಲದೆಯೇ ನಾವು ನಮ್ಮೊಳಗೆ ಬಂಧಿಗಳಾಗಿರುತ್ತೇವೆ; ನಮ್ಮ ನೆನಪುಗಳು, ಆಲೋಚನೆಗಳು, ನಾವೇ ವಿಧಿಸಿಕೊಂಡಿರುವ ಕಟ್ಟುಪಾಡುಗಳು, ಸಂಶಯಗಳು, ಭಯ, ಹೀಗೇ ಇರಬೇಕು ಎನ್ನುವ ನಮ್ಮ ರೀತಿ-ನೀತಿಗಳು, ನಾವು ಸರಿ ಎಂದುಕೊಂಡಿರುವ ಧ್ಯೇಯ-ಗುರಿಗಳು; ಅನೇಕ ಬಾರಿ ಉಸಿರು ಕಟ್ಟಿಸುವಷ್ಟು ಹೊರೆಯಾಗಿಬಿಡುತ್ತವೆ. ಹೊರಗಿನವರು ಹಾಕಿದ ಬೇಡಿಗಳನ್ನು ಒಡೆದು ಹಾಕುವುದು ಸುಲಭ, ಆದರೆ, ಇವುಗಳನ್ನು ಒಡೆದು ಹೊರಬರುವುದು ಕಷ್ಟ ಎನಿಸಿಬಿಡುತ್ತದೆ. ಹಾಗೆ, ಹೊರಬಂದಾಗಷ್ಟೆ ನಿಜವಾದ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಲು ಸಾಧ್ಯ. ತಿಲಕರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಕರೆ ಕೊಟ್ಟದು ಸರಿಯೇ, ಆದರೆ, ಅದರ ಅರ್ಥ ಇನ್ನೂ ಆಳವಾದುದು ಎಂಬುದು ನನ್ನ ಭಾವನೆ. ಭಗವಂತ ಪ್ರತಿಯೊಬ್ಬರಿಗೆ ನೀಡಿರುವ ಆತ್ಮ ಸ್ವಾತಂತ್ರ್ಯ ಖಂಡಿತವಾಗಿಯೂ ಸ್ವಾರ್ಥಕ್ಕಾಗಿ ಅಲ್ಲ, ಅದು ಪರರ ಸೇವೆಗಾಗಿ, ಏಳಿಗೆಗಾಗಿ ಮತ್ತು ಉದ್ದಾರಕ್ಕಾಗಿ, ಅದನ್ನು ಹಾಗೆಯೇ ಉಪಯೋಗಿಸಿಕೊಳ್ಳಲು ಪ್ರಯತ್ನಿಸೋಣ.

ಫಾದರ್ ವಿಜಯರಾಜ್‍, ಮೈಸೂರು