ನವ ದಿನಗಳ ಪ್ರಾರ್ಥನೆ
ಮಹಾ ಪರಿಶುದ್ದ ನಿಷ್ಕಳಂಕ ಕನ್ನಿಕೆಯೇ, ನಮ್ಮೆಲ್ಲರ ತಾಯೇ, ಕನ್ಯಾಮರಿಯಮ್ಮನವರೇ, ನಮ್ಮ ಎಡೆಬಿಡದ ಸಹಾಯವೂ, ನಮ್ಮ ಆಶ್ರಯವೂ, ನಮ್ಮ ನಂಬಿಕೆಯೂ ನೀವೇ.
ನೀವು ನಮಗೆ ಪಡೆದುಕೊಟ್ಟಿರುವ ಸಕಲ ವರಗಳಿಗಾಗಿ ದೇವರಿಗೆ ವಂದನೆಗಳನ್ನು ಸಲ್ಲಿಸುತ್ತೇವೆ. ನಾವು ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತೇವೆ. ನಮ್ಮ ಪ್ರೀತಿಯನ್ನು ತೋರಲು ಎಂದೆಂದಿಗೂ ನಿಮಗೆ ಸೇವೆ ಮಾಡುತ್ತೇವೆಂದೂ, ಸಕಲರನ್ನೂ ನಿಮ್ಮ ಬಳಿಗೆ ಕರೆತರಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆಂದೂ ವಾಗ್ದಾನ ಮಾಡುತ್ತೇವೆ.
ನಮ್ಮ ದಿನನಿತ್ಯದ ಕಷ್ಟಕಾರ್ಪಣ್ಯಗಳು ನಮ್ಮನ್ನು ಖಿನ್ನರನ್ನಾಗಿ ಮಾಡುತ್ತಿವೆ. ನಮ್ಮ ಅಪಜಯಗಳೂ ಸಂಕಟಕರವಾದ ಸ್ವಂತ ವಿಷಯಗಳೂ ನಮ್ಮ ಜೀವನದಲ್ಲಿ ಜಿಗುಪ್ಸೆಯನ್ನು ತರುತ್ತಿವೆ. ನಮ್ಮ ಮೇಲೆ ಮರುಕವಾಗಿರಿ. ಓ ಕರುಣಾಭರಿತ ತಾಯೇ, ನಮ್ಮ ಅವಶ್ಯಕತೆಗಳನ್ನು ಗಮನಿಸಿ. ಕಷ್ಟಗಳಿಂದ ಪಾರುಮಾಡಿ ಅಥವಾ ದೇವರ ಚಿತ್ತದಂತೆ ಈ ಕಷ್ಟಗಳು ನಮ್ಮ ಆತ್ಮ ಪರಿಶುದ್ದತೆಗಾಗಿದ್ದಲ್ಲಿ ಅವುಗಳನ್ನು ಎದುರಿಸುವ ತಾಳ್ಮೆಯನ್ನೂ, ಧೈರ್ಯವನ್ನೂ ಪಡೆದುಕೊಡಿರಿ. ಈ ವರಪ್ರಸಾದಗಳನ್ನು ನಾವು ನಿಮ್ಮಿಂದ ಕೇಳುತ್ತಿರುವುದು ನಮ್ಮ ಯೋಗ್ಯತೆಯ ಪುಣ್ಯದಿಂದಲ್ಲ, ಆದರೆ, ನಿಮ್ಮ ಪ್ರೀತಿ ಮತ್ತು ಶಕ್ತಿಯ ಕೃಪೆಯಿಂದ ಕೇಳುತ್ತಿದ್ದೇವೆ.
ನಾವು ನಿಮ್ಮ ಶಕ್ತಿಪೂರಿತವಾದ ನಾಮವನ್ನು ಕೂಗಿ ಕರೆಯುತ್ತಿದ್ದೇವೆ. ಜೀವಿತರ ಸಂರಕ್ಷಕರೂ, ಮರಣದ ಅವಧಿಯಲ್ಲಿರುವವರಿಗೆ ಮುಕ್ತಿದಾಯಕರೂ ನೀವೇ. ನಿಮ್ಮ ನಾಮವು ಸದಾ, ವಿಶೇಷವಾಗಿ ಶೋಧನೆ ಸಮಯದಲ್ಲೂ ಮರಣದ ವೇಳೆಯಲ್ಲೂ ನಮ್ಮ ನಾಲಿಗೆಯ ಮೇಲಿರಲಿ. ನಿಮ್ಮ ನಾಮವು ನಮ್ಮ ಭರವಸೆಯೂ, ಬಲವೂ ಆಗಿದೆ. ಧನ್ಯಳಾದ ಒಡತಿಯೇ, ನಿಮ್ಮನ್ನು ಕೂಗಿ ಕರೆದಾಗಲೆಲ್ಲಾ ನಮಗೆ ಸಹಾಯ ಮಾಡಿರಿ. ನಿಮ್ಮ ನಾಮವನ್ನು ಉಚ್ಚರಿಸಿದ ಮಾತ್ರಕ್ಕೆ ನಾವು ತೃಪ್ತರಾಗಲಾರೆವು. ನೀವೇ ಎಡೆಬಿಡದ ಮಾತೆಯೆಂದು ದಿನಂಪ್ರತಿ ಜೀವನದಲ್ಲಿ ವ್ಯಕ್ತಪಡಿಸುವೆವು.
ಪಾಪಶೋಧನೆಗಳನ್ನು ಜಯಿಸಲು ಶಕ್ತಿಯನ್ನೂ, ಯೇಸು ಕ್ರಿಸ್ತರಲ್ಲಿ ಪೂರ್ಣ ಪ್ರೀತಿಯನ್ನೂ ಪವಿತ್ರ ಮರಣವನ್ನೂ ಕೊಡಿಸಿರಿ. ನಿಮ್ಮೊಂದಿಗೂ ಮತ್ತು ನಿಮ್ಮ ದಿವ್ಯ ಕುಮಾರರೊಂದಿಗೂ ಬಾಳುವ ನಿತ್ಯ ಮೋಕ್ಷಭಾಗ್ಯವನ್ನು ಕರುಣಿಸಿರಿ.
ಪ್ರಭು ಕಲಿಸಿದ ಪ್ರಾರ್ಥನೆ
ನಮೋ ಮರಿಯಾ ಪ್ರಾರ್ಥನೆ
ಪಿತನಿಗೂ, ಸುತನಿಗೂ…
ಎಡೆಬಿಡದ ಮಾತೆಯಲ್ಲಿ ವಿಶ್ವಾಸದ ಅರಿಕೆ
ಓ ಎಡೆಬಿಡದ ಸಹಾಯ ಮಾತೆಯೇ, ವರಪ್ರಸಾದಭರಿತಳೇ, ಉದಾರ ಗುಣನಿಧಿಯೇ, ದೇವರು ನಮಗೆ ದಯಪಾಲಿಸುವ ಸಕಲ ವರಗಳ ಕಾಲುವೆ ನೀವೇ. ನೀವೇ ಪಾಪಿಗಳ ನಂಬಿಕೆ, ಪ್ರೀತಿಯ ತಾಯಿಯೇ, ನಿಮ್ಮನ್ನು ಈಕ್ಷಿಸಿ ಬೇಡುವ ನಮ್ಮಲ್ಲಿಗೆ ಬನ್ನಿ. ನಿಮ್ಮ ಕರಗಳಲ್ಲಿ ರಕ್ಷಣೆ ಇದೆ. ನಾವು ನಿಮ್ಮ ಮಕ್ಕಳು. ಪ್ರೀತಿಭರಿತ ತಾಯೇ, ನಮ್ಮನ್ನು ಆದರಿಸಿರಿ. ನಿಮ್ಮ ಸಂರಕ್ಷಣೆಯಲ್ಲಿ ನಮಗೆ ಯಾವ ಭಯವೂ ಇಲ್ಲ. ನೀವು ಯೇಸು ಕ್ರಿಸ್ತರಿಂದ ಪಾಪಕ್ಷಮೆಯನ್ನು ಪಡೆದುಕೊಡುತ್ತೀರಿ. ಯೇಸು ಕ್ರಿಸ್ತರೊಡನೆ ಒಂದಾಗಿರುವ ನಿಮ್ಮ ಶಕ್ತಿಯ ಮುಂದೆ ಎಂತಹ ನರಕಶಕ್ತಿಯೂ ನಿಲ್ಲಲಾರದು. ನಿಮ್ಮ ದಿವ್ಯಕುಮಾರರೂ ನಮ್ಮ ಸಹೋದರರೂ ಆದ ಕ್ರಿಸ್ತರು ನಮಗೆ ತೀರ್ಪುಕೊಡಲು ಬರುವಾಗ ನೀವು ನಮ್ಮ ಬಳಿ ಇರುವಿರೆಂಬ ನಿರೀಕ್ಷೆ ನಮಗಿದೆ. ಶೋಧನೆ ಸಮಯದಲ್ಲಿ ನಿಮ್ಮ ಸಹಾಯವನ್ನು ಪಡೆಯಲು ಅಸಡ್ಡೆ ಮಾಡಿದ್ದೇ ಆದರೆ ನಮ್ಮ ಆತ್ಮವನ್ನು ಕಳೆದುಕೊಳ್ಳುವೆವೆಂಬ ಭಯವಿದೆ. ಓ ಎಡೆಬಿಡದ ಸಹಾಯ ಮಾತೆಯೇ, ನಮ್ಮ ಪಾಪಗಳಿಗಾಗಿ ಕ್ಷಮೆಯನ್ನೂ, ಕ್ರಿಸ್ತರಲ್ಲಿ ಪ್ರೀತಿಯನ್ನೂ, ಅಂತ್ಯದವರೆಗೂ ನಿಷ್ಠೆಯಿಂದಿರುವ ವರವನ್ನೂ, ಸದಾ ನಿಮ್ಮ ಸಹಾಯವನ್ನೇ ಕೋರುವ ಸುಮನಸ್ಸನ್ನೂ ನಿಮ್ಮ ದಿವ್ಯ ಕುಮಾರರಿಂದ ನಮಗೆ ಪಡೆದುಕೊಡಿರಿ.
ಪ್ರಭು ಕಲಿಸಿದ ಪ್ರಾರ್ಥನೆ
ನಮೋ ಮರಿಯಾ ಪ್ರಾರ್ಥನೆ
ಪಿತನಿಗೂ, ಸುತನಿಗೂ…
ಯೇಸು ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪರಿಶುದ್ದ ದೇವಮಾತೆಯೇ ನಮಗಾಗಿ ಪ್ರಾರ್ಥಿಸಿರಿ
ಪ್ರಾರ್ಥಿಸೋಣ
ಓ ಪ್ರಭು ಯೇಸುವೇ, ನಮ್ಮ ತಾಯಿ ಕನ್ಯಾ ಮರಿಯಮ್ಮನವರನ್ನೂ ಅವರ ಅದ್ಬುತಕರವಾದ ಚಿತ್ರವನ್ನೂ ಗೌರವಿಸುವ ನಮಗೆ ಎಡೆಬಿಡದೆ ಸಹಾಯ ಮಾಡಲು ಸಿದ್ಧರಾಗಿರುವ ತಾಯಿಯನ್ನಾಗಿ ಕೊಟ್ಟಿದ್ದೀರಿ. ಆ ತಾಯಿಯ ಪ್ರೀತಿಯನ್ನು ಬೇಡುವ ನಾವು, ನಿಮ್ಮ ರಕ್ಷಣೆಯ ಫಲಗಳನ್ನು ಎಡೆಬಿಡದೆ ಅನುಭವಿಸಲು ಪಾತ್ರರಾಗುವಂತೆ ಅನುಗ್ರಹಿಸಿರಿ, ಪಿತ ಮತ್ತು ಪವಿತ್ರಾತ್ಮರೊಂದಿಗೆ ಯುಗಯುಗಾಂತರಕ್ಕೂ ಜೀವಿಸಿ ಆಳುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.
ಪ್ರಭು ಕಲಿಸಿದ ಪ್ರಾರ್ಥನೆ
ನಮೋ ಮರಿಯಾ ಪ್ರಾರ್ಥನೆ
ಪಿತನಿಗೂ, ಸುತನಿಗೂ…
ವ್ಯಾಧಿಷ್ಟರ ಕ್ಷೇಮಕ್ಕಾಗಿ ಪ್ರಾರ್ಥನೆ (ನಿರಂತರ ಪ್ರಾರ್ಥನೆ)
ಓ ಪ್ರಭೂ, ಶರೀರ ಬಲಹೀನತೆಯಿಂದ ಬೇನೆಪಡುವ ನಿಮ್ಮ ಸೇವಕರಾದ (ಹೆಸರನ್ನು ನಿವೇದಿಸುವುದು) ನೋಡಿರಿ. ನೀವು ಸೃಷ್ಟಿಸಿದ ನಿಮ್ಮ ಮಕ್ಕಳಾದ ನಮಗೆ ಉಪಶಮನವನ್ನು ನೀಡಿರಿ. ನಿಮ್ಮಲ್ಲಿ ನಮಗಾಗಿ ಬಿನ್ನಯಿಸುವ ಎಡೆಬಿಡದ ಸಹಾಯ ಮಾತೆಯ ಪ್ರಾರ್ಥನೆಗಳನ್ನು ಆಲಿಸಿರಿ. ನಾವು ನಮ್ಮ ಅಸೌಖ್ಯ, ನೋವು, ಕಷ್ಟ-ಕಾರ್ಪಣ್ಯಗಳಿಂದ ಪರಿಶುದ್ದರಾಗಿ, ನಿಮ್ಮ ಕರುಣೆಯಿಂದ ಶೀಘ್ರವಾಗಿ ಗುಣಹೊಂದಿ, ಆರೋಗ್ಯಭಾಗ್ಯವನ್ನು ಕಾಣುವಂತಾಗಲಿ. ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್.
ಪ್ರಭು ಕಲಿಸಿದ ಪ್ರಾರ್ಥನೆ
ನಮೋ ಮರಿಯಾ ಪ್ರಾರ್ಥನೆ
ಪಿತನಿಗೂ, ಸುತನಿಗೂ…