The Yoke of Christ (ನೊಗ)

ನೊಗ ಎಂದರೆ ಎತ್ತಿನಗಾಡಿಯ ಮುಂಭಾಗದಲ್ಲಿ ಎತ್ತುಗಳ ಹೆಗಲ ಮೇಲೆ ಹೊರಿಸುವ ಮರದ ದಿಮ್ಮಿ. ಇದು ಸದೃಢವಾಗಿಯೂ, ಭಾರವಾಗಿಯೂ ಇರುತ್ತದೆ. ಹೊಸ ಎತ್ತುಗಳನ್ನು ಗಾಡಿಗೆ ಹೂಡುವುದು ಸುಲಭವಲ್ಲ, ಅವು ಹಿಂಜರಿಯುತ್ತವೆ, ಓಡಿ ಹೋಗಲು ಪ್ರಯತ್ನಿಸುತ್ತವೆ ಮತ್ತು ಹೊರೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತವೆ. ಗಾಡಿಗೆ ಹೂಡಿ ಪಳಗಿರುವ ಎತ್ತುಗಳು ತಾವೇ ಮುಂದೆ ಬರುತ್ತವೆ, ಹೊರುತ್ತವೆ ಮತ್ತು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ಮಾಡುತ್ತವೆ.

ಯೇಸುಸ್ವಾಮಿ ನೀಡುವ ಆಹ್ವಾನದ ಮಾತಿದು, “ದುಡಿದು ಭಾರಹೊತ್ತು ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ”.

ನಮ್ಮ ಬಾಳಿನಲ್ಲಿ ನಾವು ಜವಾಬ್ದಾರಿ ಎಂಬ ನೊಗಕ್ಕೆ ನಾವೇ ಹೆಗಲು ಕೊಡುತ್ತೇವೆ: ವಿದ್ಯಾರ್ಥಿ ಒಳ್ಳೆಯ ಅಂಕಗಳು ಬಂದಿದೆ ಎನ್ನುವಾಗ ತನ್ನ ಸಾಮರ್ಥ್ಯಕ್ಕೆ ತಕ್ಕನಾದ ಅಥವಾ ಹೆಚ್ಚು ಕಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಆನಂತರ, ಕಷ್ಟವಾದರೂ ಆ ವಿಷಯವನ್ನು ಕಲಿಯಬೇಕಾದುದು ಅವನ ಜವಾಬ್ದಾರಿ, ಕಷ್ಟವಾಗುತ್ತದೆ ಎಂದು ಬಿಟ್ಟುಬಿಡಲು ಸಾಧ್ಯವಿಲ್ಲ ಅಥವಾ ಓಡಿ ಹೋಗಲು ಆಗದು; ವಿದ್ಯಾಭ್ಯಾಸ ಮುಗಿಸಿದ್ದೇ ಉದ್ಯೋಗ! ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗವನ್ನೇ ಹುಡುಕಿಕೊಳ್ಳುವುದು, ಅದಕ್ಕಿಂತ ಕಡಿಮೆ ಯೋಗ್ಯತೆಯ ಕೆಲಸವಾಗಲಿ, ಸಂಬಳದ ಕೆಲಸವನ್ನು ಯಾರೂ ಬಯಸುವುದಿಲ್ಲ. ಕೆಲಸ ಒತ್ತಡದಿಂದ ಕೂಡಿದ್ದರೂ ಸಂಪಾದನೆ ಹೆಚ್ಚಿರುವುದರಿಂದ ಆ ಕೆಲಸವನ್ನೇ ಆಯ್ಕೆಮಾಡಿಕೊಳ್ಳುತ್ತೇವೆ; ವಿವಾಹ ಎಂಬುದು ಜೀವನದ ಅವಿಭಾಜ್ಯ ಅಗತ್ಯವೇ ಆದರೂ ಮತ್ತೊಬ್ಬ ವ್ಯಕ್ತಿಯೊಂದಿಗೆ ನಡೆಸಬೇಕಾದ ಬಾಳು. ಈ ಮತ್ತೊಬ್ಬ ವ್ಯಕ್ತಿಯ ಇಷ್ಟ-ಕಷ್ಟಗಳ ಜೊತೆಗೆ ಜೀವನಪೂರ್ತಿ ಬಾಳ್ವೆ ನಡೆಸಬೇಕು ಎಂಬ ಜವಾಬ್ದಾರಿಯನ್ನು ಹೊರಬೇಕು. ಒಂದಾದ ನಂತರ ಬಿಟ್ಟು ಹೋಗಲು ಆಗದು, ಬರುವ ಮನೆ-ಕುಟುಂಬ-ಮಕ್ಕಳು ಎಂಬ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ಧರಾಗಬೇಕು. ಹೀಗಿದ್ದೂ, ವಿವಾಹ-ಕುಟುಂಬ ಎಂಬ ನೊಗಕ್ಕೆ ಹೆಗಲು ಕೊಡುವವರೇ ಎಲ್ಲರೂ. ಇವು ಕೆಲವೇ ಉದಾಹರಣೆಗಳು. ಇಂತಹ ನೊಗಗಳು ಪ್ರತಿದಿನದ ಬಾಳಿನಲ್ಲಿ ಹಲವು ಇವೆ: ಸಾಲದಿಂದ ಸಂಬಂಧಗಳವರೆಗೆ, ಆರೋಗ್ಯದಿಂದ ಸ್ನೇಹದವರೆಗೆ ಎಲ್ಲವೂ ನೊಗ ಅಥವಾ ಜವಾಬ್ದಾರಿಗಳೇ.

ನೊಗ ಎಂದ ಮೇಲೆ ಅದು ಭಾರ, ಕಷ್ಟ, ಓಡಿಹೋಗಲು ಆಗದು! ಮೇಲೆ ಹೇಳಿದ ಎಲ್ಲಾ ವಿಷಯಗಳಲ್ಲೂ ಇದು ಸತ್ಯ. ಅಂತೆಯೇ, ಒಂದಲ್ಲಾ ಒಂದು ಸಮಯದಲ್ಲಿ ಈ ನೊಗದ ಕೆಳಗೆ ನಿತ್ರಾಣರಾಗುತ್ತೇವೆ, ನಿಶ್ಯಕ್ತರಾಗುತ್ತೇವೆ, ಬಳಲುತ್ತೇವೆ, ವಿಶ್ರಾಂತಿ ಬಯಸುತ್ತೇವೆ. ಆದರೆ, ಒರಗಲು ಯಾರ ಹೆಗಲೂ ದೊರಕದು, ಕಾರಣ, ಎಲ್ಲರೂ ಇದೇ ಪರಿಸ್ಥಿತಿಯಲ್ಲಿರುವವರೇ. ಈಗ ಯೇಸುಸ್ವಾಮಿಯ ಕರೆ ಆಪ್ತ ಎನಿಸುತ್ತದೆ, “ದುಡಿದು ಭಾರಹೊತ್ತು ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ”. ಪ್ರಿಯರೇ, ಇದು ಕೇವಲ ಕರೆ ಮಾತ್ರವಲ್ಲ, ಇದು ವಾಗ್ದಾನ, ಖಂಡಿತವಾಗಿ ನೆರವೇರಿಸುತ್ತೇನೆ ಎನ್ನುವ ಯೇಸುಸ್ವಾಮಿಯ ವಾಗ್ದಾನ.

ಯೇಸುಸ್ವಾಮಿ ಹೇಳಿದ ಇದರ ಮುಂದಿನ ಸಾಲು ನಮ್ಮ ಈ ಜೀವನಕ್ಕೆ ಅಗತ್ಯ, “ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ”. ಯೇಸುಸ್ವಾಮಿಯೂ ಒಂದು ನೊಗವನ್ನು ಹೊತ್ತಿದ್ದಾರೆ. ಆದರೆ ಅವರೇ ನುಡಿಯುತ್ತಾರೆ, “ನನ್ನ ನೊಗ ಹಗುರ, ನನ್ನ ಹೊರೆ ಸುಗಮ”. ಅವರ ನೊಗ, “ಲೋಕೋದ್ಧಾರ” ಅಥವಾ ಮನುಷ್ಯರಿಗೆ ದೇವರ ಪ್ರೀತಿಯನ್ನು ಅರ್ಥೈಸಿ ದೇವರೆಡೆಗೆ ಕರೆ ತರುವ ಜವಾಬ್ದಾರಿ. ಆದರೆ, ಅದರ ಮಾರ್ಗ ದುರ್ಭರ. ಅವರಿಗೂ ತಿಳಿದಿತ್ತು, ದೇವರ ಪ್ರೀತಿಯ ಬಗ್ಗೆ ಮಾತನಾಡಿದರೆ ಜನ ಕೇಳರು, ತಿರಸ್ಕರಿಸುವರು ಮತ್ತು ಒಪ್ಪರು; ಬೋಧನೆಯನ್ನು ಆಲಿಸರು ಮತ್ತು ಮಹತ್ಕಾರ್ಯಗಳನ್ನು ಸಂಶಯಿಸುವರು; ಮಾತ್ರವಲ್ಲ, ಅವರನ್ನು ಹಿಂಸಿಸುವರು, ಮತ್ತು ಕೊಲ್ಲುವರು. ಆದರೂ, ಈ ಜವಾಬ್ದಾರಿ ಎಂಬ ನೊಗವನ್ನು ಯೇಸುಸ್ವಾಮಿ ಯಶಸ್ವಿಯಾಗಿ ನೆರವೇರಿಸಿದ್ದರಿಂದ ಅವರ ನೊಗ ಹಗುರವಾಯಿತು ಮತ್ತು ಹೊರೆ ಸುಗಮವಾಯಿತು.

ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದುದು ಯೇಸುಸ್ವಾಮಿ ಈ ಜವಾಬ್ದಾರಿ ಎಂಬ ನೊಗವನ್ನು ಹೊರಲು ಸಾಧ್ಯವಾದುದು ಹೇಗೆ? ಅದು ಸಾಧ್ಯವಾದದ್ದು, ದೇವರೊಂದಿಗೆ ಅವರಿಗಿದ್ದ ನಿಕಟ ಬಾಂಧವ್ಯದಿಂದ. ಶುಭಸಂದೇಶದಲ್ಲಿ ನಾವು ಓದುವಂತೆ, ಮುಂಜಾವಿನಲ್ಲೂ, ಇಳಿಸಂಜೆಯಲ್ಲೂ ಯೇಸುಸ್ವಾಮಿ ತಮ್ಮ ತಂದೆಯಲ್ಲಿ ಪ್ರಾರ್ಥಿಸಲು ನಿರ್ಜನ ಪ್ರದೇಶಕ್ಕೆ ತೆರಳುತ್ತಿದ್ದರು; ಪ್ರೇಷಿತರ ಆಯ್ಕೆ, ಗೆತ್ಸೆಮನಿಯಲ್ಲಿ ಮರಣಕ್ಕೆ ಸಿದ್ಧತೆ ಇಂತಹ ಮುಖ್ಯವಾದ ಕಾರ್ಯಗಳನ್ನು ಮಾಡುವುದಕ್ಕೆ ಅವರು ಪ್ರಾರ್ಥಿಸುತ್ತಿದ್ದುದನ್ನು ನಾವು ಕಾಣುತ್ತೇವೆ. ಹೀಗೆ, ಸರ್ವಶಕ್ತರಾದ ತಂದೆ ನನ್ನೊಂದಿಗೆ ಇದ್ದಾರೆ ಎಂಬ ಸತ್ಯ ಅವರ ಕಾರ್ಯದಲ್ಲಿ ಮುಂದುವರಿಯುವಂತೆ ಮಾಡಿತ್ತು. ಅವರು ಸದಾ ತಂದೆಯೊಂದಿಗಿನ ಈ ಸತ್ಸಂಬಂಧದಲ್ಲಿ ಇದ್ದುದರಿಂದಲೇ ಅವರು ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಲು ಸಾಧ್ಯವಾಯಿತು.

ಯೇಸುಸ್ವಾಮಿಯ ಹೇಳಿಕೆಯ ಇನ್ನೊಂದು ಭಾಗ: “ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ”. ಯೇಸುಸ್ವಾಮಿಯ ಈ ಮಾತಿನ ಹಿಂದಿರುವ ಉದ್ದೇಶ: “ಕಲಿತುಕೊಳ್ಳಿ”. ವಿದ್ಯಾರ್ಥಿ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಸೇರಿದ ಮೇಲೆ ಜೀವನವಿಡೀ ಅಲ್ಲೇ ಉಳಿಯುವುದಿಲ್ಲ, ಜ್ಞಾನಾರ್ಜನೆಯಾದ ಮೇಲೆ ಹಿಂತಿರುಗಬೇಕು, ಅವನು ಕಲಿತಿದ್ದನ್ನು ಒರೆಗೆ ಹಚ್ಚಬೇಕು, ಪಾಠವಾಗಿ ಕಲಿತಿದ್ದನ್ನು ಅನುಭವವಾಗಿ ಮಾರ್ಪಡಿಸಿಕೊಳ್ಳಲು ಶ್ರಮಿಸಬೇಕು. ಯೇಸುಸ್ವಾಮಿ ತಮ್ಮ ಜವಾಬ್ದಾರಿ ಎಂಬ ನೊಗದಿಂದ ಹಿಂಜರಿಯದೇ, ಓಡಿ ಹೋಗದೇ, ಹೊರೆಯಿಂದ ತಪ್ಪಿಸಿಕೊಳ್ಳದೇ ತಮ್ಮ ಕರ್ತವ್ಯದಲ್ಲಿ ಸಫಲರಾದಂತೆ, ನಾವೂ ಸಹ ಅವರಿಂದ ಕಲಿತು, ಹಿಂತಿರುಗಿ ಬಂದು ಸಾಲದಿಂದ-ಸಂಬಂಧಗಳವರೆಗೆ, ಆರೋಗ್ಯದಿಂದ-ಸ್ನೇಹದವರೆಗೆ ನಮ್ಮ ಬಾಳಿನಲ್ಲಿ ನಾವೇ ಹೆಗಲಿಗೆ ಹಾಕಿ ಕೊಂಡಿರುವ ಜವಾಬ್ದಾರಿಯ ನೊಗವನ್ನು ಹೊತ್ತು ಸಫಲರಾಗಬೇಕು.

ಫಾ ವಿಜಯರಾಜ್, ಮೈಸೂರು

***********