TURN

ಬೆಟ್ಟ-ಗುಡ್ಡಗಳ ರಸ್ತೆಯಲ್ಲಿ ಪ್ರಯಾಣಿಸುವಾಗ ಅಲ್ಲಿಯ ತಿರುವು ರಸ್ತೆಗಳು ವಿಶಿಷ್ಟ ಅನುಭವವನ್ನು ತರುತ್ತವೆ. ರಸ್ತೆ ತಿರುಗುತ್ತಾ ಮೇಲೆ ಹತ್ತುವ ಮತ್ತು ಕೆಳಗೆ ಇಳಿಯುವ ಪರಿ ರೋಮಾಂಚನವನ್ನೇ ಉಂಟುಮಾಡುತ್ತವೆ. ಸದಾ ಪ್ರಯಾಣಿಸುವ ರಸ್ತೆಯಾದಲ್ಲಿ ಅಲ್ಲಿನ ತಿರುವುಗಳು ಸಾಮಾನ್ಯ ಎನಿಸಿಬಿಡುತ್ತವೆ, ಆದರೆ, ಹೊಸಬರಿಗೆ ಅದೇ ತಿರುವುಗಳು ಕೌತುಕಮಯವಾಗಿರುತ್ತವೆ.

ಇದು ಮನುಷ್ಯ ಬಾಳಲೂ ಸಹಜ. ಗ್ರೀಕ್‍ ತತ್ವಜ್ಞಾನಿ ಹೆರಾಕ್ಲಿಟಸ್‍ ಹೇಳುತ್ತಾರೆ, no one can step into the same water twice”, ಅಂದರೆ, ಸಮಯ ಎಂಬುದು ನಿರಂತರ ಸಾಗುವಂತಹದ್ದು, ಕಳೆದು ಹೋದ ಸಮಯವನ್ನು ಮತ್ತೆ ಪಡೆದುಕೊಳ್ಳಲಾಗದು ಎಂದರ್ಥ. ಜೀವನದ ಅನಿರೀಕ್ಷಿತ ತಿರುವುಗಳು ಹೀಗೆಯೇ ಕೌತುಕಮಯ ಮತ್ತು ಮರುಕಳಿಸದವು .

ಬಾಲ್ಯದಲ್ಲಿ ಹುಟ್ಟುಹಬ್ಬಕ್ಕೊ, ಹಬ್ಬಕ್ಕೋ, ಮನೆಯಲ್ಲಿ ನಡೆಯುವ ಶುಭಕಾರ್ಯಕ್ಕೋ ತಂದೆ-ತಾಯಿಯರು, ಬಂಧುಗಳು ತರುತ್ತಿದ್ದ ಉಡುಗೊರೆಗಳು, ಶಾಲೆಯಲ್ಲಿ ನಡೆವ ಪಠ್ಯೇತರ ಚಟುವಟಿಕೆಗಳು, ಎಷ್ಟೇ ಚೆನ್ನಾಗಿ ಓದಿದ್ದರೂ ಫಲಿತಾಂಶಕ್ಕಾಗಿ ಎದುರು ನೋಡುವ ಸಮಯ, ಉದ್ಯೋಗಕ್ಕಾಗಿ ಅರ್ಜಿ ಗುಜರಾಯಿಸಿ ಉತ್ತರಕ್ಕಾಗಿ ಕಾಯುವಾಗಿನ ತವಕ, ಮೊದಲ ಸಂಬಳ, ಮೊದಲ ಬಡ್ತಿ, ವಿವಾಹ, ಕಂದನ ಜನನ, ಕೊನೆಗೆ ಮರಣ ಕೂಡ ಬಾಳಿನಲ್ಲಿ ನಾವು ಕಾಣುವ ಕೌತುಕಮಯ ತಿರುವುಗಳು. ಇಂತಹ ತಿರುವುಗಳಿಂದಲೇ ಬಾಳು ಸ್ವಾರಸ್ಯಕರವಾಗಿರುತ್ತದೆ.

ಕೆಲ ಬಾರಿ, ತಿರುವುಗಳಿಗಾಗಿ ಕಾದಿದ್ದರೂ ಎದುರಾಗದಿದ್ದಾಗ ಅವು ನೋವು ತರುತ್ತವೆ, ಇನ್ನೂ ಕೆಲ ಬಾರಿ ಅನಿರೀಕ್ಷಿತವಾಗಿ ಬರುವ ತಿರುವುಗಳಿಗೆ ಸಿದ್ದರಾಗಿರದ್ದಿದ್ದಲ್ಲಿ ಅಥವಾ ಅವುಗಳನ್ನು ಉಪಯೋಗಿಸಿಕೊಳ್ಳಲಾಗದಿದ್ದಲ್ಲಿ ಅವಕಾಶಗಳು ಕೈತಪ್ಪಿ ಹೋಗಬಹುದು, ಅದರಲ್ಲಿಯೂ, ತಿರುವುಗಳನ್ನು ನಿರೀಕ್ಷಿಸಿ ಅವುಗಳಿಗೆ ಸಿದ್ದರಾಗಿರದಿದ್ದಲ್ಲಿ ಮೂರ್ಖತನ ಎನಿಸಿಬಿಡುತ್ತದೆ.

ತಿರುವುಗಳು ಗುರಿಯನ್ನು ಬದಲಿಸುವುದಿಲ್ಲ, ಆದರೆ, ಗುರಿಯನ್ನು ನೋಡುವ ನಮ್ಮ ದೃಷ್ಠಿಯನ್ನು ಬದಲಿಸುತ್ತದೆ, ಒಮ್ಮೆ ಮುಮ್ಮುಖವಾಗಿ ಚಲಿಸುತ್ತಿದ್ದ ಹಾದಿ ತಿರುವಿನೊಂದಿಗೆ ಅದೇ ರಸ್ತೆಯನ್ನು ಹಿಂತಿರುಗಿ ನೋಡುವಂತೆ ಮಾಡುತ್ತದೆ ಅಥವಾ ಅದೇ ರಸ್ತೆಯನ್ನು ಮೇಲಿನಿಂದ ಅಥವಾ ಕೆಳಗಿನಿಂದ ನೋಡುವ ಬೇರೆ ಕೋನವನ್ನು ಏರ್ಪಡಿಸಿಕೊಡುತ್ತದೆ. ಹಾಗೆಯೇ, ನಮ್ಮ ಜೀವನದ ತಿರುವುಗಳು ನಮ್ಮ ದೃಷ್ಠಿಕೋನವನ್ನು ಬೇರೆಯಾಗಿಸಬಹುದು ಮತ್ತು ನಮ್ಮ ಕಾರ್ಯಗಳಿಗೆ ಬೇರೆ ಆಯಾಮವನ್ನೇ ನೀಡುತ್ತವೆ.

ರಸ್ತೆಯ ತಿರುವುಗಳು ಚಲಿಸುವ ವೇಗವನ್ನು ಕಡಿಮೆಗೊಳಿಸಿ ನಿಧಾನಗೊಳಿಸುವಂತೆ ಜೀವನದ ಅನೇಕ ತಿರುವುಗಳು ನಮಗೆ ಜೀವನವನ್ನು ಪರಾಮರ್ಶಿಸಲು ಸಮಯವನ್ನು ಏರ್ಪಡಿಸಿಕೊಡುತ್ತದೆ. ಆದುದರಿಂದ, ತಿರುವುಗಳು ಒಳ್ಳೆಯವೇ, ಅವು ಜೀವನದ ಏಕತಾನತೆಯಿಂದ ನಮ್ಮನ್ನು ಹೊರಗೆಳೆಯುತ್ತದೆ. ಅದರಲ್ಲೂ, ಅವು ಅನಿರೀಕ್ಷಿತವಾಗಿದ್ದರಂತೂ ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತವೆ.  ಕೆಲ ಬಾರಿ  ಅವು ನಮ್ಮ ಜೀವನದ ಹಾದಿಯನ್ನು ಬದಲಾಯಿಸುವಂತಹವಾಗಿರಲೂಬಹುದು. ಆಗ, ಜೀವನದ ಹೊಸ ತಾಳಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಹಳೆಯ ರೀತಿ-ನೀತಿಗಳನ್ನು ಬಿಟ್ಟು ಇಂತಹ ಹೊಸ ತಿರುವುಗಳಿಗೆ ಹೊಂದಿಕೊಳ್ಳುವುದು ಸವಾಲು ಎನಿಸುತ್ತದೆ, ಆದರೂ, ಅದರಿಂದ ತಪ್ಪಿಸಿಕೊಳ್ಳಲು ಆಗದೇ ಹೋದಾಗ ಅನ್ಯ ಮಾರ್ಗವಿಲ್ಲದೇ ತಿರುವುಗಳನ್ನು ಒಪ್ಪಿಕೊಳ್ಳಬೇಕಾಗುತ್ತವೆ.

ಜೀವನದ ತಿರುವುಗಳು ಸದಾ ಒಳ್ಳೆಯವೇ ಆಗಿರುವುದೂ ಇಲ್ಲ, ಆಗ, ಅವುಗಳನ್ನು ಎದುರಿಸುವ ಛಾತಿ ತೋರಬೇಕಾಗುತ್ತದೆ. ಅಂತಹ ಧೈರ್ಯ ಬರುವುದು ಹಿಂದಿನ ತಿರುವುಗಳಲ್ಲಿ ಪಡೆದ ಅನುಭವಗಳಿಂದ ದೊರೆತ ದೃಢ ಮನೋಭಾವದಿಂದಲೇ ಸಾಧ್ಯ, ಉದಾಹರಣೆಗೆ, ಮಾರಣಾಂತಿಕ ಖಾಯಿಲೆಗಳು ಅಥವಾ ಪ್ರೀತಿಪಾತ್ರರ ಮರಣ ಇತ್ಯಾದಿ ನಮ್ಮನ್ನು ಕಂಗೆಡಿಸಿಬಿಡುತ್ತವೆ. ಅಂತಹವುಗಳನ್ನು ಎದುರಿಸಿಯೂ ಜೀವನ ಪ್ರಯಾಣವನ್ನು ಹೊಸ ತಿರುವುಗಳ ನಿರೀಕ್ಷೆಯಲ್ಲಿ ಸದಾ ಧೈರ್ಯದಿಂದ ಮುನ್ನಡೆಸಬೇಕಾಗುತ್ತದೆ.

ಫಾ. ವಿಜಯರಾಜ್, ಮೈಸೂರು